ಭಟ್ಕಳ: ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪಾಠಶಾಲೆಗಳಾಗಿದ್ದು, ಭಕ್ತಿ, ಮಾನವೀಯತೆ ಹಾಗೂ ಸಾಮಾಜಿಕ ಒಗ್ಗಟ್ಟಿನ ಕೇಂದ್ರಗಳಾಗಿ ಬೆಳೆಯಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಹಾಗೂ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಹೇಳಿದರು.

ಸಣಭಾವಿ–ಅಳ್ವೇಕೋಡಿಯ ಶ್ರೀ ವಿಶ್ವ ಶಕ್ತಿ ದೇವಸ್ಥಾನದ ನಾಲ್ಕನೇ ವರ್ಷದ ವರ್ಧಂತಿ ಉತ್ಸವ, ಮೂರನೇ ವರ್ಷದ ರಥೋತ್ಸವ ಹಾಗೂ ಎರಡನೇ ವರ್ಷದ ಮಾರಿಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ವೇದಿಕೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪೂಜ್ಯ ಶ್ರೀ ದೇವಿದಾಸ ಸ್ವಾಮೀಜಿಯವರು ತಮ್ಮ ಬದುಕನ್ನು ತಾಯಿಯ ಆರಾಧನೆ ಹಾಗೂ ಸಮಾಜಸೇವೆಗೆ ಸಮರ್ಪಿಸಿಕೊಂಡಿರುವುದು ಶ್ಲಾಘನೀಯ. ಕಾಣಿಕೆ ಹುಂಡಿ ಇಲ್ಲದ, ಸೇವೆಗಳಿಗೆ ರಸೀದಿ ವ್ಯವಸ್ಥೆ ಇಲ್ಲದ ಈ ದೇವಸ್ಥಾನದಲ್ಲಿ ಹಸಿದವರಿಗೆ ಅನ್ನ ನೀಡುವ ಹಾಗೂ ಸಂಕಷ್ಟದಲ್ಲಿರುವವರಿಗೆ ಗೌಪ್ಯವಾಗಿ ನೆರವಾಗುವ ಸೇವಾಕಾರ್ಯಗಳು ನಡೆಯುತ್ತಿರುವುದು ಮಾನವೀಯತೆಯ ಪ್ರತೀಕವಾಗಿದೆ ಎಂದರು.

ದೈವಸಂಕಲ್ಪವಿದ್ದರೆ ಸಾಮಾನ್ಯ ಮನುಷ್ಯನೂ ಅಸಾಮಾನ್ಯ ಸಾಧನೆ ಮಾಡಬಲ್ಲ. ತಾಯಿ ವಿಶ್ವಶಕ್ತಿಯೇ ತನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಉದ್ಘಾಟಕನಾಗಿ ಕರೆಸಿಕೊಂಡಿದ್ದಾಳೆ ಎಂಬ ಭಾವನೆ ಮೂಡಿದೆ. ಹಿರಿಯರ ನಡುವೆ ಈ ಗೌರವ ದೊರೆತಿರುವುದು ತಮ್ಮ ಬದುಕಿನ ಸೌಭಾಗ್ಯ ಎಂದು ಹೇಳಿದರು.
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಲ್ಲಿ ಹಿಂದೆ ನಡೆದ ನಾಗಮಂಡಲ ಉತ್ಸವವು ಲೋಕಕಲ್ಯಾಣದ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಆಧುನಿಕ ತಂತ್ರಜ್ಞಾನ ನಮ್ಮ ಕೈಯಲ್ಲಿರಲಿ, ಸಂಸ್ಕೃತಿ ನಮ್ಮ ಹೃದಯದಲ್ಲಿರಲಿ. ರಥೋತ್ಸವದಲ್ಲಿ ತಾಯಿಯ ರಥ ಎಳೆಯುವ ಕೈಗಳು ಸಮಾಜದ ನೋವನ್ನೂ ಹಂಚಿಕೊಳ್ಳುವ ಕೈಗಳಾಗಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಶ್ಚಿಮಘಟ್ಟದ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಧರ್ಮ ಮತ್ತು ದೇವರ ಆರಾಧನೆಯ ಜೊತೆಗೆ ಯುವಜನತೆ ರಾಷ್ಟ್ರಪ್ರೇಮ ಹಾಗೂ ರಾಷ್ಟ್ರಸೇವೆಯ ಕಡೆಗೆ ಮುನ್ನಡೆಯಬೇಕು. ಆಗ ಮಾತ್ರ ಭದ್ರ ಹಾಗೂ ಸುಭದ್ರ ಭಾರತ ನಿರ್ಮಾಣ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿಠ್ಠಲ ದೈಮನೆ ಮಾತನಾಡಿ, ಕೆಲವೇ ವರ್ಷಗಳಲ್ಲಿ ಶ್ರೀ ವಿಶ್ವಶಕ್ತಿ ದೇವಸ್ಥಾನ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ಅಭಿವೃದ್ಧಿ ದೈವಸಂಕಲ್ಪದಿಂದ ದಿವ್ಯ ಶಕ್ತಿಯಿಂದ ಸಾಧ್ಯವಾಗಿದೆ ಎಂದರು.
ರಂಗಕಲಾವಿದ ಅಶೋಕ ಮಹಾಲೆ, ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ, ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೆ.ಬಿ. ಮಡಿವಾಳ ಹಾಗೂ ಮಂಜುನಾಥ ಭಟ್ ಮಾತನಾಡಿದರು.
ವೇದಿಕೆಯಲ್ಲಿ ನಾರಾಯಣ ಬಿ. ಆರ್ಕಟಿಮನೆ, ದೇವಿದಾಸ ಗುಡಿಗಾರ, ವೆಂಕಟ್ರಮಣ ಮೊಗೇರ ಹಾಗೂ ಎನ್.ಡಿ. ಮೊಗೇರ ಉಪಸ್ಥಿತರಿದ್ದರು.
ವಿಶ್ವಶಕ್ತಿ ಭಜನಾ ಮಂಡಳಿಯ ಮಹಿಳೆಯರು ಪ್ರಾರ್ಥಿಸಿದರು. ಶಿಕ್ಷಕಿ ರಾಜೀವಿ ಮೊಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

