ಸಹಕಾರ ರತ್ನ’ ಡಾ॥ ಎಂ. ಎನ್. ರಾಜೇಂದ್ರಕುಮಾ‌ರ್ ನೇತೃತ್ವದಲ್ಲಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ-ಧರ್ಮ ಜಾಗೃತಿ ಯಾತ್ರೆ’

ಮಂಗಳೂರು: ಸಹಕಾರ ರತ್ನ’ ಡಾ॥ ಎಂ. ಎನ್. ರಾಜೇಂದ್ರಕುಮಾ‌ರ್ ನೇತೃತ್ವದಲ್ಲಿ ಸೆಪ್ಟೆಂಬರ್ 14ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ ‘ಧರ್ಮ ಜಾಗೃತಿ ಯಾತ್ರೆ’ ಉಜಿರೆಯಿಂದ ಧರ್ಮಸ್ಥಳಕ್ಕೆ ಮಧ್ಯಾಹ್ನ 12.00 ಗಂಟೆಗೆ ಹೊರಡಲಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಧರ್ ರೈ ಬಾಲ್ಯೊಟ್ಟು ತಿಳಿಸಿದರು .

ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಹಬಾಳ್ವೆಯ ಪ್ರತೀಕವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಾಚೀನ ಪಾರಂಪರ್ಯವನ್ನು ಹೊಂದಿರುವ ಪವಿತ್ರ ಕ್ಷೇತ್ರ. ಇಂತಹ ಪೂಜ್ಯನೀಯ ಕ್ಷೇತ್ರಕ್ಕೆ ಕಳಂಕ ತರುತ್ತಿರುವ ದುಷ್ಟಶಕ್ತಿಗಳ ಷಡ್ಯಂತರವನ್ನು ವಿರೋಧಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ‘ಸಹಕಾರ ರತ್ನ’ ಬಂಧುಗಳು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಒಗ್ಗಟ್ಟಾಗಿ, ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ‘ಧರ್ಮ ಜಾಗೃತಿ ಯಾತ್ರೆ’ಯನ್ನು ಕೈಗೊಳ್ಳಲಾಗುವುದು.

ಮಧ್ಯಾಹ್ನ 12.00 ಗಂಟೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧದ ಸಹಕಾರಿ ಸಂಘಗಳ ಪದಾಧಿಕಾರಿಗಳು, ಸದಸ್ಯರುಗಳು ಉಜಿರೆಯಲ್ಲಿ ಒಟ್ಟುಸೇರಿ ಧರ್ಮಸ್ಥಳಕ್ಕೆ ಧರ್ಮ ಜಾಗೃತಿ ಯಾತ್ರೆ ನಡೆಸಲಿದ್ದಾರೆ. ಇದರಲ್ಲಿ ಸುಮಾರು 1500ಕ್ಕೂ ಅಧಿಕ ಸಹಕಾರಿ ಸಂಘಗಳ 3000ಕ್ಕೂ ಅಧಿಕ ವಾಹನಗಳಲ್ಲಿ ಸಹಕಾರಿಗಳು ಧರ್ಮಯಾತ್ರೆ ಮಾಡಲಿದ್ದಾರೆ. ಸುಮಾರು ೧೦ ಸಾವಿರಕ್ಕೂ ಅಧಿಕ ಸಂಖ್ಯೆಯ ಸಹಕಾರಿ ಬಂಧುಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇದೊಂದು ಧರ್ಮ ಸಂರಕ್ಷಣೆಯ ಯಾತ್ರೆಯಾಗಿದ್ದು . ಧಾರ್ಮಿಕ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರಿಗಳ ವಿರುದ್ಧ ಈ ಯಾತ್ರೆಯನ್ನು ಆಯೋಜಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು ಯಾವಾಗಲೂ ಸೌಹಾರ್ದತೆಯಿಂದ, ಪರಸ್ಪರ ಸಹಬಾಳ್ವೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಪವಿತ್ರ ಧರ್ಮಸ್ಥಳ ಕ್ಷೇತ್ರದ ಮೇಲೆ ವಿಶೇಷ ಗೌರವ, ಶ್ರದ್ಧಾ ಭಕ್ತಿಯನ್ನು ಸಹಕಾರ ಕ್ಷೇತ್ರ ಹೊಂದಿದೆ. ಹಾಗಾಗಿ, ಈ ಧರ್ಮ ಕ್ಷೇತ್ರಕ್ಕೆ ಅಪಚಾರವಾಗವೆಸಗುವ ಷಡ್ಯಂತ್ರಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡುವ ಚಾರಿತ್ರಿಕ ಯಾತ್ರೆಯಾಗಿ ಇದು ಮೂಡಿ ಬರಲಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಲಭಿಸಿದೆ. ಇಂತಹ ಸಾಮಾಜಿಕ ಸ್ಪಂದನೆಯ ಧಾರ್ಮಿಕ ಕ್ಷೇತ್ರವನ್ನು ಅಪಪ್ರಚಾರ ಮಾಡುವ ಷಡ್ಯಂತ್ರಿಗಳು ಧಾರ್ಮಿಕ ಭಾವನೆಗಳನ್ನು ದುರ್ಬಲಗೊಳಿಸುತ್ತಿರುವುದು ಖಂಡನೀಯ. ಈ ರೀತಿ ಇನ್ಯಾವತ್ತೂ ಯಾವುದೇ ಧರ್ಮ ಕ್ಷೇತ್ರಗಳಿಗೆ ಹಾಗೂ ಧರ್ಮಗಳಿಗೆ ಈ ಅಪಚಾರವಾಗಬಾರದು. ಸಹಕಾರ ಕ್ಷೇತ್ರ ಸರ್ವ ಧರ್ಮಕ್ಕೂ ಗೌರವ ನೀಡುವ ಕ್ಷೇತ್ರ ಆಗಿರುವುದರಿಂದ ಸರ್ವ ಧರ್ಮಗಳ ಸಂರಕ್ಷಣೆಯ ದೃಷ್ಟಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಈ ಧರ್ಮ ಜಾಗೃತಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ , ರಾಮ ಕೃಷ್ಣ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರು ಹಾಗು ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಜಯರಾಮ್ ಶೆಟ್ಟಿ , ವಾದಿರಾಜ್ ಶೆಟ್ಟಿ , ಮನ್ಮಥ್ , ಜಯರಾಮ್ ರೈ ಉಪಸ್ಥಿತತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!