ಮಂಗಳೂರು: ನಮ್ಮ ಕನಸು ಬ್ಯಾನರ್ನಲ್ಲಿ ಕೆ.ಸುರೇಶ್ ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ‘ಪಿದಾಯಿ’ ಇಂದು ಕರಾವಳಿಯಾದ್ಯಂತ ಬಿಡುಗಡೆಗೊಂಡಿದೆ.


ಶಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆಯಾಗುವುದರ ಜತೆಗೆ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ. ಇದೀಗ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೂ ಆಯ್ಕೆ ಯಾಗಿದೆ.ಚಿತ್ರದ ಮುಖ್ಯಭೂಮಿಕೆಯಲ್ಲಿ ಕನ್ನಡದ ಖ್ಯಾತನಟರಾದ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ಅವರ ಜತೆಗೆ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ರೂಪಾಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್ ಕುಮಾರ್, ಅನಿಲ್ರಾಜ್ ಉಪ್ಪಳ, ರವಿ ವರ್ಕಾಡಿ, ಡಿ.ಬಿ.ಸಿ ಶೇಖರ್, ಅನಿತಾ ಚಂದ್ರಶೇಖರ್ ಹಾಗೂ ಬಾಲಪ್ರತಿಭೆಗಳಾದ ಮೋನಿಶ್, ತ್ರಿಷಾ, ಧ್ರುವ, ನಿಹಾ, ಕುಶಿ ಶೇಖರ್ ಮೊದಲಾದವರು ಅಭಿನಯಿಸಿದ್ದಾರೆ.


ರಾಷ್ಟ್ರಪ್ರಶಸ್ತಿ ವಿಜೇತ ಜೀಟಿಗೆ ಚಿತ್ರದ ಛಾಯಾಗ್ರಾಹಕ ಉಣ್ಣೆ ಮಾಡವೂರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಸಿನಿಮಾ ಸಂಕಲನ ಮಾಡಿ ದಾಖಲೆ ಹೊಂದಿರುವ ಸುರೇಶ್ ಅರಸ್ ಚಿತ್ರಕ್ಕೆ ಸಂಕಲನಕಾರರಾಗಿದ್ದಾರೆ. ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಜತೆಗೂಡಿ ಬರೆದಿದ್ದಾರೆ. ಚಿತ್ರವನ್ನು ದ.ಕ. ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.


ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಕುಣಿತ ಭಜನೆಗೆ ಸಾಹಿತ್ಯ ಬರೆದವರು ಯೋಗೀಶ್ ಎ.ಎಸ್., ಶಶಿರಾಜ್ ಕಾವೂರು ಬರೆದ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.


ಚಿತ್ರದ ಬಿಡುಗಡೆ ಸಮಾರಂಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ , ಅಶ್ವಿನಿ ಎಂ.ಎಲ್ ,ಡಾ.ವಿಜಯ ಪಂಡಿತ್ ಮಂಗಲ್ಪಾಡಿ ,ಶ್ರೀಕಾಂತ್ ಶೆಟ್ಟಿ, ತ್ರಿಶೂಲ್ ಶೆಟ್ಟಿ,ನಟರಾದ ಶರತ್ ಲೋಹಿತಾಶ್ವ . ಪುಷ್ಪರಾಜ್ ಬೊಳ್ಳಾರ್, ರೂಪಾಶ್ರೀ ವರ್ಕಾಡಿ, ಇಳಾ ವಿಟ್ಲ, ಪ್ರೀತೇಶ್ ಕುಮಾರ್, ಅನಿಲ್ರಾಜ್ ಉಪ್ಪಳ,ಅಶೋಕ್ ಬೇಕೂರ್ ಮೊದಲಾದವರು ಉಪಸ್ಥಿತರಿದ್ದರು .


