ಮಂಗಳೂರು: ಅಕ್ರಮ ಕಸಾಯಿ ಖಾನೆ ಮಾಡಿಕೊಂಡಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 3 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿ ಮನೆಯನ್ನು ಮುಟ್ಟು ಗೋಲು ಹಾಕಲು ಕ್ರಮ ಕೈಗೊಂಡಿದ್ದಾರೆ.
ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ 8ನೇ ಬ್ಲಾಕ್ ಚೊಕ್ಕಬೆಟ್ಟುವಿನ ಅಂಚೆ ಕಛೇರಿ ರಸ್ತೆಯ ಅಬ್ದುಲ್ ಖಾದರ್ ತನ್ನ ಮನೆಯಲ್ಲಿ ಅಕ್ರಮವಾಗಿ ದನ ವಧೆಯನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಪಡೆದ ಸುರತ್ಕಲ್ ಪೊಲೀಸ್ ಠಾಣೆ ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚೊಕ್ಕಬೆಟ್ಟುವಿನ ಅಜೀಜ್ ಅಹಮ್ಮದ್, ಇಮ್ಮಿಯಾಜ್ , ಎ ಕೆ ಆಶೀಕ್ ಬಂಧಿತ ಆರೋಪಿಗಳು. ಇನ್ನೊರ್ವ ಆರೋಪಿ ಬಶೀರ್ ಚೊಕ್ಕಬೆಟ್ಟು ಎಂಬಾತ ತಲೆಮರೆಸಿಕೊಂಡಿದ್ದಾನೆ. ಆರೋಪಿ ಇಮ್ಮಿಯಾಜ್ ನು ತಂದಿದ್ದ 2 ಹೆಣ್ಣು ಕರುಗಳನ್ನು ಬಶೀರ್ ಹಾಗೂ ಅಶಿಕ್ ಇವರೊಂದಿಗೆ ಸೇರಿಕೊಂಡು ವಧೆ ಮಾಡಿ ಕೆ.ಜಿ ಗೆ 300/- ರೂ ರಂತೆ ಸುಮಾರು 233.89 ಕೆಜಿ ದನದ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ.
ಬಂಧಿತ ಆರೋಪಿಯಾದ ಇಮ್ಮಿಯಾಜ್ ಮೇಲೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರೆ, ಪಣಂಬೂರು, ಸುರತ್ಕಲ್ ಠಾಣೆ ಸೇರಿದಂತೆ ಉಡುಪಿ ಜಿಲ್ಲೆಯ ಕಾಪು, ಕುಂದಾಪುರ, ಕಾರ್ಕಳ ಠಾಣೆಯಲ್ಲಿ ಸುಮಾರು 09 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.ಅಝೀಜ್ ಅಹಮ್ಮದ್ ನು ಈ ಕೃತ್ಯಕ್ಕೆ ನಡೆಸಿದ ಮನೆಯನ್ನು ಮುಟ್ಟುಗೋಲು ಹಾಕುವ ಬಗ್ಗೆ ಸಹಾಯಕ ಆಯುಕ್ತರಿಗೆ ವರದಿ ಮಾಡಲಾಗಿದೆ.