ಹದಿಹರೆಯದವರಲ್ಲಿ ಮೊಡವೆ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಣ್ಣು, ಗಂಡು ಎನ್ನುವ ಬೇಧವಿಲ್ಲದೆ ಎಲ್ಲರಲ್ಲೂ ಮುಖದ ಮೊಡವೆ ಉಂಟಾಗುತ್ತದೆ. ಕೆಲವರಲ್ಲಿ ಚರ್ಮದ ಕೆಂಪು ಗುಳ್ಳೆಯಾದರೆ ಇನ್ನೂ ಕೆಲವರಲ್ಲಿ ಕೀವಿನ ಗುಳ್ಳೆಯ ರೀತಿಯಲ್ಲಿ ಉಂಟಾಗುತ್ತದೆ.
ಮೊಡವೆ ಉಂಟಾಗಲು ಕಾರಣಗಳೆಂದರೆ…
೧.ಮುಖದ ಮೇಲಿನ ಎಣ್ಣೆಯ ಅಂಶ ಹೆಚ್ಚಾದರೆ ಮೊಡವೆ ಉಂಟಾಗುತ್ತದೆ. ಎಣ್ಣೆಯ ಅಂಶ ಶೇಖರಣೆಯಾಗಲು ಕಾರಣಗಳೆಂದರೆ ಎಣ್ಣೆಯುಕ್ತ ಆಹಾರ, ಸರಿಯಾಗಿ ನಿದ್ದೆ ಮಾಡದೇ ಇರುವುದು, ಅತಿಯಾದ ಚಿಂತೆ ಮಾಡುವುದು ಮತ್ತು ಅಧಿಕ ಮಾಂಸದ ಸೇವನೆಯಿಂದ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತದೆ.
೨.ಹಾರ್ಮೋನ್‌ಗಳಲ್ಲಿ ಬದಲಾವಣೆ
೩.ಹೆಚ್ಚು ಧೂಳು ಮತ್ತು ಬಿಸಿಲಿನಲ್ಲಿ ಓಡಾಡುವುದರಿಂದ
೪.ರಾಸಾಯನಿಕಯುಕ್ತ ಮೇಕಪ್‌ಗಳ ಬಳಕೆಯಿಂದ ಮೊಡವೆ ಉಂಟಾಗುತ್ತದೆ.
ಹೆಚ್ಚು ನೀರನ್ನು ಕುಡಿಯುತ್ತಿರಿ
ಸರಿಯಾದ ನೀರನ್ನು ಸೇವನೆ ಮಾಡುವುದು ಮೊಡವೆಗಳನ್ನು ನಿಯಂತ್ರಣ ಮಾಡಲು ಇರುವ ಉತ್ತಮ ಮನೆಮದ್ದಾಗಿದೆ. ಪ್ರತಿನಿತ್ಯ 2 ರಿಂದ 3 ಲೀ ನೀರನ್ನು ಸೇವನೆ ಮಾಡುವುದರಿಂದ ವೈದ್ಯರ ಬಳಿ ಹೋಗಿ ಮೊಡವೆಯಾಗಿದೆ ಚಿಕಿತ್ಸೆ ನೀಡಿ ಎನ್ನುವ ಪ್ರಮೇಯವೇ ಬರುವುದಿಲ್ಲ.
ಆಗಾಗ ಮುಖ ತೊಳೆಯುತ್ತಿರಿ
ಎಲ್ಲಾದರೂ ಹೊರಗೆ ಬಿಸಿಲು, ಧೂಳಿಗೆ ಹೋಗಿ ಬಂದ ನಂತರ ಮುಖವನ್ನು ತೊಳೆದುಕೊಳ್ಳಿ. ಇದರಿಂದ ಧೂಳು ಮುಖದ ಮೇಲೆ ಶೇಖರಣೆಯಾಗುವುದನ್ನು ತಪ್ಪಿಸಿ, ಮೊಡವೆಯಾಗದಂತೆ ತಡೆಯಬಹುದು.
ಹಣ್ಣುಗಳ ಸೇವನೆ
ಹಣ್ಣುಗಳು ದೇಹದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲ. ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತವೆ. ಹೀಗಾಗಿ ರಸಭರಿತ ಹಣ್ಣುಗಳ ಸೇವನೆಯ ಅಭ್ಯಾಸ ಪ್ರತಿನಿತ್ಯ ಇದ್ದರೆ ಉತ್ತಮ. ಇದರಿಂದ ಚರ್ಮದ ಮೇಲಿನ ಮೊಡವೆ ಬರದಂತೆ ತಡೆಯಬಹುದು.
ಅತಿಯಾದ ಮೇಕಪ್ ಬಳಕೆ ಬೇಡ
ಇತ್ತೀಚಿನ ದಿನಗಳಲ್ಲಿ ಮನೆಯಿಂದ ಹೊರಗೆ ಕಾಲಿಡುವುದಾದರೆ ಮೇಕಪ್ ಹಾಕಿಕೊಳ್ಳದೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಈ ರೀತಿ ಪದೇ ಪದೇ ಹೆಚ್ಚು ರಾಸಾಯನಿಕ ಪದಾರ್ಥಗಳಿರುವ ಮೇಕಪ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ.
ಮುಖ್ಯವಾಗಿ ಪದೇ ಪದೇ ನೀವು ಬಳಸುವ ಬ್ರ್ಯಾಂಡ್‌ಗಳನ್ನು ಬದಲಾಯಿಸಬೇಡಿ. ಇದರಿಂದ ಮುಖದ ಚರ್ಮಕ್ಕೆ ಹಾನಿಯಾಗಿ ಮೊಡವೆಗಳಾಗುತ್ತವೆ.
ಪೇರಳೆ ಎಲೆಗಳು
ಪೇರಳ ಗಿಡದ ಎಳೆಯ ಎಲೆಗಳನ್ನು ಅರಿಶಿನ ಸೇರಿಸಿ ಅರೆದು ಹಚ್ಚುವುದರಿಂದ ಮೊಡವೆ ಬೇಗ ಮಾಯವಾಗುತ್ತವೆ.
ಪುದೀನಾ
ಪುದೀನಾ ಸೊಪ್ಪಿಗೆ ಅರಿಶಿನ ಬೆರೆಸಿ ಅರೆದು ಹಚ್ಚಬೇಕು ಅಥವಾ ಪುದೀನಾ ಸೊಪ್ಪನ್ನು ಬೇವು ಮತ್ತು ತುಳಸಿ ಎಲೆ ಬೆರೆಸಿ ಅರೆದು ಹಚ್ಚಿಕೊಂಡು ಅರ್ಧಗಂಟೆ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.