ಮಂಗಳೂರು: ಆಕಸ್ಮಿಕ ಬೆಂಕಿ ಅವಘಡಕ್ಕೆ ಗುಜರಿ ಅಂಗಡಿ ಸುಟ್ಟು ಕರಕಲಾಗಿದೆ.ಈ ಘಟನೆ ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66 ರ ಸೋಮೇಶ್ವರ ಉಚ್ಚಿಲ ಜಂಕ್ಷನ್ ಬಳಿ ಸಂಭವಿಸಿದೆ. ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಆದಿತ್ಯವಾರ ಮಧ್ಯಾಹ್ನ ತಲಪಾಡಿ ಉಚ್ಚಿಲದ ಅಂಡರ್ ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಅವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಹೊತ್ತಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು ದಟ್ಟ ಹೊಗೆಯು ಉಚ್ಚಿಲ, ತಲಪಾಡಿ, ತೊಕ್ಕೊಟ್ಟು ಪ್ರದೇಶಗಳಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳದ ವಾಹನವು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಘಟನೆಯಿಂದ ಗುಜರಿ ಅಂಗಡಿಯಲ್ಲಿ ದಾಸ್ತಾನು ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ.
ಘಟನಾ ಸ್ಥಳದಿಂದ ದಟ್ಟವಾದ ಹೊಗೆಯು ಎದ್ದು, ಸುಮಾರು ಎರಡು ಗಂಟೆಗಳ ಕಾಲ ಜನನಿಬಿಡ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟುಮಾಡಿತು. ಅಂಗಡಿಯ ಸಮೀಪದಲ್ಲೇ ಪೆಟ್ರೋಲ್ ಬಂಕ್ ಹಾಗೂ ಮನೆಗಳಿವೆ. ಬೆಂಕಿ ವ್ಯಾಪಿಸದಂತೆ ತಡೆಯಲು ಅಗ್ನಿಶಾಮಕದಳ ಶ್ರಮಿಸಿದೆ.