ಮಂಗಳೂರಲ್ಲಿ‌ ಹನಿಟ್ರ್ಯಾಪ್ ಕೇಸ್ ಬಯಲು; ಉದ್ಯಮಿಯನ್ನು ಬೆದರಿಸಿ 44.80 ಲಕ್ಷ ದೋಚಿದ ತಂಡ .

ಮಂಗಳೂರಲ್ಲಿ ಇತ್ತೀಚಿಗೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕೇರಳ ಮೂಲದ ಗಲ್ಫ್ ಉದ್ಯಮಿಯೊಬ್ಬರಿಗೆ ಬಂಟ್ವಾಳದ ಹನಿಟ್ರ್ಯಾಪ್ ತಂಡವೊಂದು ಮೋಸ ಮಾಡಿ 44.80 ಲಕ್ಷ ರೂ.ಗಳನ್ನು ವಂಚಿಸಿದೆ ಎಂದು ಬೆಂಗಳೂರಿನ ನ್ಯಾಯವಾದಿ ಸೌದಾ ಆರೋಪಿಸಿದ್ದಾರೆ. ಅವರು ಶುಕ್ರವಾರ ಮಂಗಳೂರಿನ ವುಡ್‌ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಕೇರಳದ 53 ವರ್ಷದ ಮುಹಮ್ಮದ್ ಅಶ್ರಫ್ ತಾವರಕಡನ್ ಎಂಬುವವರು ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅವರಿಗೆ ಬಶೀರ್ ಕಡಂಬು, ಸಫಿಯಾ ಮಾಣಿ ಮತ್ತು ಇತರ ಆರೋಪಿಗಳು ಸೆ.24ರಂದು ಮಂಗಳೂರಿಗೆ ಕರೆಸಿ ಹೆಣ್ಣು ತೋರಿಸುವ ನೆಪದಲ್ಲಿ ಫೋಟೋ ವಿಡಿಯೋ ಮಾಡಿಸಿ ಬಳಿಕ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ. ವಿವಾಹಿತರಾಗಿರುವ ಅಶ್ರಫ್ ವೀಡಿಯೋ ಬಹಿರಂಗವಾಗುತ್ತದೆ ಎಂಬ ಭಯದಿಂದ 44.80 ಲಕ್ಷ ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಈ ಮಧ್ಯೆ ಅಶ್ರಫ್ ಅವರ ಪತ್ನಿಗೂ ಬೇರೆಯವರ ಅಶ್ಲೀಲ ವೀಡಿಯೋವೊಂದನ್ನು ಕಳುಹಿಸಿ ಹಣ ನೀಡದಿದ್ದರೆ ನಿಮ್ಮ ಪತಿಯ ಇಂತಹ ವೀಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಕಳೆದ ವಾರ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿ ಅಶ್ರಫ್ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಒಂದು ವಾರ ಕಳೆದರೂ ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಕೇಸ್ ದಾಖಲಿಸಲು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ತೊಂದರೆಯಾಗಿತ್ತು. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಕೇಸ್ ದಾಖಲಾಗಿದೆ. ಇದೀಗ ಸಂತ್ರಸ್ತ ಅಶ್ರಫ್ ರಿಗೆ ನ್ಯಾಯ ದೊರೆಯಬೇಕಿದೆ ಎಂದರು.ಆರೋಪಿ ಸಫಿಯಾ ಎಂಬುವವರು 2010ರಿಂದಲೂ ಹನಿಟ್ರ್ಯಾಪ್ ನಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಇಂತಹ ಹಲವು ತಂಡಗಳು‌ ಮಂಗಳೂರು ವಿವಿಧೆಡೆ ಸಕ್ರಿಯವಾಗಿದೆ. ಇವರು ಉದ್ಯಮಿಗಳನ್ನು ತಮ್ಮ ಬಲೆಗೆ ಹಾಕಿಕೊಂಡು ಹಣ ದೋಚುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಸೌದಾ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಮುಹಮ್ಮದ್ ಅಶ್ರಫ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!