ವ್ಯಕ್ತಿಯೊಬ್ಬರ ಮೃತದೇಹ ರಕ್ತಸಿಕ್ತ ರೀತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರಿನ ಕುಂಪಲ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ದಯಾನಂದ ಎಂದು ಗುರುತಿಸಲಾಗಿದೆ.
ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಇವ್ರ ಮೃತದೇಹ ಸಿಕ್ಕಿದ್ದು, ನಾಯಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಲ್ಲಿರೋ ಲಾಂಡ್ರಿ ಎದುರಲ್ಲೇ ದಯಾನಂದ್ ಮೇಲೆ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪಕ್ಕದಲ್ಲೇ ಮುಖಕ್ಕೆ ರಕ್ತ ಲೇಪಿಸಿದ್ದ ಬೀದಿ ನಾಯಿಯೊಂದು ಇದ್ದು ಜನರನ್ನು ಕಂಡು ಓಡಿ ಹೋಗಿದೆ.
ಸ್ಥಳೀಯರು ಘಟನೆ ಬಗ್ಗೆ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಯಾನಂದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ದೇರಳಕಟ್ಟೆ ಖಾಸಗಿ ಹೆಗ್ಡೆ ಆಸ್ಪತ್ರೆಯ ಫಾರೆನ್ಸಿಕ್ ಮತ್ತು ಸೋಕೊ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಸಾಕ್ಷ ಕಲೆ ಹಾಕಿದೆ. ಮೇಲ್ನೋಟಕ್ಕೆ ಪ್ರಾಣಿ ದಾಳಿಯಿಂದಲೇ ದಯಾನಂದ್ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಪೊಲೀಸರು ಸಿ.ಸಿ ಕ್ಯಾಮೆರಗಳನ್ನೂ ಪರಿಶೀಲನೆ ನಡೆಸಿದ್ದಾರೆ.