ದೈಗೋಳಿ ಆಶ್ರಮದಲ್ಲಿ ದೀರ್ಘಕಾಲೀನ ರೋಗ ಪೀಡಿತರ ಆರೈಕೆ ಸೌಲಭ್ಯ ಹಿರಿಯ ನಾಗರಿಕರಿಗೆ ನವಚೇತನ ಕೇರ್ ಸೆಂಟರ್ ಸಾಥ್

ಮಂಗಳೂರು: ನವಚೇತನ ಕೇರ್ ಸೆಂಟರ್, ನರ ಸಂಬಂಧಿತ, ಮಾನಸಿಕ ಕಾಯಿಲೆ, ಕ್ಯಾನ್ಸ‌ರ್ ನಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಮನೆಯ ಹೊರಗೆ ಕಡಿಮೆ ವೆಚ್ಚದ ಆರೈಕೆ ವ್ಯವಸ್ಥೆಯ ಕುರಿತಂತೆ ಜಾಗೃತಿ ನಡೆಸುತ್ತಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ದೈಗೋಳಿಯಲ್ಲಿರುವ ಶ್ರೀ ಸಾಯಿ ನಿಕೇತನ ಆಶ್ರಮದಲ್ಲಿ 18 ಹಾಸಿಗೆ ಸಾಮರ್ಥ್ಯದ ಸೌಲಭ್ಯವೊಂದನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನೆಯು ನವೆಂಬರ್ 23, 2025ರ ಭಾನುವಾರ ಅಪರಾಹ್ನ 2ಗಂಟೆಗೆ ನಡೆಯಲಿದೆ ಎಂದು ಭಟ್ ಬಯೋಟೆಕ್, ಬೆಂಗಳೂರು ಇದರ ಚೇರ್‌ಮನ್ ಡಾ.ಶಾಮ್ ಭಟ್ ತಿಳಿಸಿದರು .

ಅವರು ನಗರದ ಪ್ರತಿಷ್ಠಿತ ಹೋಟೆಲ್ ನಡೆಸಿಡಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ನವಚೇತನ ಕೇರ್ ಸೆಂಟರ್ ಕೈಗೆಟಕುವ ವೆಚ್ಚದಲ್ಲಿ ಹಿತಕಾರಿ ಸೌಲಭ್ಯಗಳ ಅಪೇಕ್ಷೆ ಮತ್ತು ಮನೆಯಲ್ಲಿ ಸಂಕೀರ್ಣವಾದ ವೈದ್ಯಕೀಯ ಅಗತ್ಯಗಳನ್ನು ನಿರ್ವಹಿಸುವಲ್ಲಿ ಕುಟುಂಬಗಳು ಒದ್ದಾಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಮನೆಯಿಂದ ಹೊರಗೆ ಮನೆ ವಾತಾವರಣದಲ್ಲಿ ಸೂಕ್ತ ಆರೈಕೆ ಮೂಲಕ ಚೇತರಿಕೆಗೆ ನೆರವಾಗುವ ವ್ಯವಸ್ಥೆಗಳಿಗೆ ಇಂದು ಬೇಡಿಕೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ವೈದ್ಯಕೀಯ ಕಾಳಜಿಯ ಅಗತ್ಯವಿರುವ ರೋಗಿಗಳಿಗೆ ಗುಣಮಟ್ಟದ ಜೀವನ, ಸುರಕ್ಷತೆ, ಘನತೆಗಳನ್ನು ಖಾತ್ರಿಪಡಿಸುವ ಇಂತಹ ಒಂದು ಕಾಳಜಿ ಕೇಂದ್ರದ ಅಗತ್ಯ ಇರುವುದನ್ನು ಮನಗಂಡು ಬೆಂಗಳೂರಿನ ಭಟ್ ಬಯೋಟೆಕ್ ಇಂಡಿಯಾ (ಪೈ) ಲಿಮಿಟೆಡ್ ಸಂಸ್ಥೆಯ ಸಹಸಂಸ್ಥೆಯಾದ ನವಚೇತನ ಕೇರ್ ಸೆಂಟರ್ ಇಂತಹ ಯೋಜನೆಯನ್ನು ರೂಪಿಸಿದೆ ಎಂದರು.

ಈ ಸೇವಾ ಕೇಂದ್ರವು ನಿರ್ಗತಿಕರು, ಹಿರಿಯ ನಾಗರಿಕರು, ಸೌಲಭ್ಯ ವಂಚಿತರು ಮತ್ತು ಮಾನಸಿಕ ಅಸ್ವಸ್ಥರ ಸೇವೆಯಲ್ಲಿ ಖ್ಯಾತಿಗಳಿಸಿರುವ ದೈಗೋಳಿಯ ಶ್ರೀ ಸಾಯಿ ಸೇವಾ ಪ್ರತಿಷ್ಠಾನಮ್ನ ಸಹಯೋಗದಲ್ಲಿ ಅದು ಇಂತಹ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ. ಹಿರಿಯ ನಾಗರಿಕರಿಗೆ ಎದುರಾಗುವಂತಹ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ನೆರವಾಗುವುದು ನವಚೇತನದ ಕಾಳಜಿಯಾಗಿದೆ.ಭಟ್ ಬಯೋಟೆಕ್ ಈಗಾಗಲೇ ಪುತ್ತೂರಿನ ಶಾಂತಿಗೋಡಿನ ಬಳಿ ಹಿರಿಯ ನಾಗರಿಕರಿಗಾಗಿ ವಿಶಿಷ್ಟವಾದ ನವಚೇತನ ರಿಟಾಯರ್‌ಮೆಂಟ್ ಟೌನ್‌ಶಿಪ್ ಸ್ಥಾಪಿಸಿ ಹಿರಿಯ ನಾಗರಿಕರಿಗೆ ಉತ್ತಮ ಜೀವನವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವ ಸಂಸ್ಥೆಯಾಗಿದೆ ಎಂದರು.

ಈ ಕೇಂದ್ರದಲ್ಲಿ ಈಗ ಹೆಚ್ಚಿನ ಕುಟುಂಬಗಳಿಗೆ ಇಂತಹ ಸೌಲಭ್ಯ ಪಡೆಯುವ ಅವಕಾಶವಿದೆ. 24*7ವೈದ್ಯಕೀಯ ಮೇಲ್ವಿಚಾರಣೆ, ಪಿಸಿಯೋಥೆರಪಿ, ವೃತ್ತಿಪರ ಥೆರಪಿ, ವೈಯಕ್ತಿಕ ಆರೈಕೆಗಳಂತಹ ಅಗತ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ. ನವಚೇತನ ಕೇರ್ ಸೆಂಟರ್ ರೋಗಿಗಳ ದೈಹಿಕ ಚೇತರಿಕೆಗಷ್ಟೇ ಬೆಂಬಲವಾಗಿರದೆ. ಅವರಿಗೆ ಮಾನಸಿಕ, ಭಾವನಾತ್ಮಕ ಚೈತನ್ಯ ತುಂಬಿ ಸಮಗ್ರ ನೆಲೆಯಲ್ಲಿ ಅವರ ಯೋಗಕ್ಷೇಮಕ್ಕೆ ನೆರವಾಗುತ್ತದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ವಿಶ್ವಸ್ಥರಾದ ಡಾ.ಉದಯ ಕುಮಾರ್ ನೂಜಿ , ಡಾ ಶಾರದಾ ಉದಯ ಕುಮಾರ್ , ಭಟ್ ಬಯೋಟೆಕ್, ಬೆಂಗಳೂರು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪವನ್ ಕುಮಾರ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!