ಪ್ರಧಾನಿ ಉಡುಪಿ ಭೇಟಿ ಹಿನ್ನಲೆಯಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಪೊಲೀಸ್ ಭದ್ರತೆ

ಪ್ರಧಾನಿ ಉಡುಪಿ ಭೇಟಿ ಹಿನ್ನೆಲೆಯಲ್ಲು ಕೃಷ್ಣನಗರಿ ಉಡುಪಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ರಂದು ಉಡುಪಿಗೆ ಆಗಮಿಸುತ್ತಿದ್ದು ಅಕ್ಷರಶಃ ಉಡುಪಿ ಖಾಕಿ ಕೋಟೆಯಾಗಿ ಮಾರ್ಪಾಡಾಗಿದೆ. ಶುಕ್ರವಾರದಂದು ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದಿಂದ ಕಲ್ಸಂಕದ ವರೆಗೂ ಪ್ರಧಾನಿ ರೋಡ್‌ಶೋ ನಡೆಯಲಿದ್ದು ಇದಕ್ಕಾಗಿ ಎರಡು ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಈ ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ ಮಾಲಕರಿಗೆ ಅಂದು ಅಂಗಡಿ ತೆರೆಯದಂತೆ ಸೂಚನೆಯನ್ನು ಜಿಲ್ಲಾಡಳಿತ ರವಾನಿಸಿದೆ.

ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪರಿಪಾಲನೆಗೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಿದೆ. ಎಲ್ಲಿಯೂ ಯಾವುದೇ ರೀತಿಯಲ್ಲೂ ವ್ಯತ್ಯಾಸ, ಸಮಸ್ಯೆಗಳು ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನ.28ರಂದು ನಗರದಲ್ಲಿ ಯಾವುದೇ ಕಾಮಗಾರಿ, ಹೊಂಡ ತೋಡುವುದು ಇತ್ಯಾದಿಗಳನ್ನು ಮಾಡಬಾರದು. ಹಾಗೆಯೇ ಕಾರ್ಯಕ್ರಮ ನಡೆಯುವ ದಿನ ಸಹಿತ ಮೊದಲೆರೆಡು ದಿನ ಪರವಾನಿಗೆ ಇಲ್ಲದೇ ದ್ರೋಣ್ ಹಾರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲೂ ತುಸು ವ್ಯತ್ಯಾಸ ಆಗಲಿರುವುದರಿಂದ ನ.28ಕ್ಕೆ ಸೀಮಿತವಾಗಿ ಉಡುಪಿ ನಗರ, ಮಲ್ಪೆ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.ಲಕ್ಷಕಂಠ ಗೀತಾ ಪಾರಾಯಣದ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಮಂಗಳವಾರ ಸಂಜೆ ವೇಳೆಗೆ ಮುಖ್ಯವೇದಿಕೆಯ ನಿರ್ಮಾಣ ಕಾಮಗಾರಿ ಭಾಗಶಃ ಮುಗಿದಿತ್ತು. ಪಾರಾಯಣಕ್ಕೆ ಕುಳಿತುಕೊಳ್ಳಲು ಅಗತ್ಯ ಮ್ಯಾಟ್‌ಗಳ ಅಳವಡಿಕೆಯನ್ನು ಮಾಡಲಾಗುತ್ತಿದೆ. ವೇದಿಕೆ ಎಷ್ಟು ಎತ್ತರ ಇರಬೇಕು ಮತ್ತು ಶೂನ್ಯ ವಲಯ ನಿರ್ಮಾಣ ಇತ್ಯಾದಿಗಳು ಎಸ್‌ಪಿಜಿ ಸೂಚನೆಯಂತೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಕೇಸರಿ ಬಾವುಟ ಹಾರಾಟ ಆರಂಭವಾಗಿದೆ. ಪ್ರಧಾನಿಯವರ ಭಾವಚಿತ್ರ ಇರುವ ಕಟೌಟ್‌ಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೆಲವು ಕಡೆಗಳಲ್ಲಿ ಕೇಸರಿ ಬಂಟಿಂಗ್ಸ್ ಗಳನ್ನು ಹಾಕಲಾಗಿದೆ. ಎಲ್ಲ ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!