ಮಂಜೇಶ್ವರ: ಸುಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಶಪ್ರೇಮ, ದೇವಭಕ್ತಿ ,ಸನಾತನ ಧರ್ಮ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಇದರ ಪ್ರಥಮ ವಾರ್ಷಿಕವನ್ನು ಭಕ್ತಿಪೂರ್ವಕವಾಗಿ ಶ್ರದ್ಧ ಭಕ್ತಿಯಿಂದ ಹರಿನಾಮ ಸಂಕೀರ್ತನೆಯೊಂದಿಗೆ ಆಚರಿಸಲಾಯಿತು.ತಂಡದ ಸ್ಥಾಪಕರಾದ ಧಾರ್ಮಿಕ ,ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ರವರ ಮುಂದಾಳುತ್ವದಲ್ಲಿ ಹಾಗು ತಂಡದ ಪೋಷಕರಾದ ಶ್ರೀ ಪ್ರಶಾಂತ್ ಭಟ್ ಚಕ್ರತೀರ್ಥ,ಖ್ಯಾತ ವಕೀಲರಾದ ಶ್ರೀ ರಾಮ್ ಪ್ರಸಾದ್ ಮಂಗಳೂರು,ಶ್ರೀ ಯತೀಶ್ ಕುಂಜತ್ತೂರು ,ಶ್ರೀ ಶ್ರೀಕಾಂತ್ ಮುಂಬೈ ಇವರ ಸಹಕಾರದೊಂದಿಗೆ ಮತ್ತು ನಿರಂತರ ತಂಡದ ಸಂಕೀರ್ತನೆ ಯೊಂದಿಗೆ ಬೆನ್ನೆಲುಬಾಗಿ ನಿಂತಿರುವ ಶ್ರೀ ನವೀನ್ k ಪದವು,ಪ್ರಶಾಂತ್ ಪದವು, ಪುರುಷೋತ್ತಮ್ ಕೆ. ಎಲ್ ಪದವು , ಮಾಧವ ಪದವು ,ಲೋಹಿತ್ ಆಚಾರ್ಯ ತೂಮಿನಾಡು ,ನಿರಂಜನ್ ತೂಮಿನಾಡು ಇವರ ಪರಿಪೂರ್ಣವಾದ ಸಹಕಾರದೊಂದಿಗೆ ಬಹಳ ಯಶಸ್ವಿಯಾಗಿ ನಡೆಯಿತು.
ಶ್ರೀ ಭಾರತಾಂಬ ತಂಡ ಕಳೆದ ಒಂದು ವರ್ಷದಲ್ಲಿ ವಿವಿಧ ರೀತಿಯ ಸೇವೆಗಳನ್ನು ಧಾರ್ಮಿಕವಾಗಿ ಯೂ ಸಾಮಾಜಿಕವಾಗಿಯೂ ನೀಡುತ್ತಾ ಬಂದಿದೆ. ಶ್ರೀ ಕ್ಷೇತ್ರ ಕೊಂಡೆವೂರಿನಲ್ಲಿ ಮತ್ತು ಶ್ರೀ ಬಂಟ್ವಾಳದ ಸುರಭಿ ಗೋ ಆಶ್ರಮದಲ್ಲಿ ಗೋ ಪೂಜೆ ಮಾಡುವ ಮುಖಾಂತರ ಗೋವು ರಕ್ಷಣೆ ಮತ್ತು ಪರಿಪಾಲನೆ ಸನಾತನ ಧರ್ಮದ ಮೌಲ್ಯಗಳಲ್ಲಿ ಒಂದು ಎಂಬ ಧ್ಯೇಯವನ್ನು ಸಾರುವ ಮೂಲಕ ಮಾದರಿಯಾಗಿದೆ.ಭಾರತ ಭೂಮಿಯ ಐತಿಹಾಸಿಕ ಮೌಲ್ಯಗಳನ್ನು ಸಂಕೀರ್ತನೆ ಮೂಲಕ ಪೋಣಿಸಿ ಭಾರತದ ಗತವೈಭವವನ್ನು ಪುನರವಲೋಕನ ಮಾಡಲು ತಂಡಕ್ಕೆ ಸಾಧ್ಯವಾಗಿದೆ.ಇದೆ ರೀತಿ ವಿವಿಧ ರೀತಿಯಲ್ಲಿ ಸಹಾಯ ಹಸ್ತವನ್ನು ಕೂಡ ಮಾಡುತ್ತಿದೆ.