ಮಂಗಳೂರು: ಚಿನ್ನದ ಸರ ಕಸಿದ ಪ್ರಕರಣದ ಬೆನ್ನತ್ತಿದ ಕದ್ರಿ ಠಾಣೆ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಸೆರೆಹಿಡಿದು ನಾಲ್ಕು ದ್ವಿಚಕ್ರ ವಾಹನ ಮತ್ತು ಎರಡು ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ವೆಲ್ಲಟ್ಟಿ ವೀಡು, ವಲಿಯರ್ತಲ ನಿವಾಸಿ ಆದಿತ್ ಗೋಪಾನ್ @ ಮುತ್ತು ಕೃಷ್ಣ (32) ಎಂದು ಗುರುತಿಸಲಾಗಿದೆ. ಕಳೆದ ನ.21ರಂದು ಸಂಜೆ ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ಧ ಮಹಿಳೆಯು ತನ್ನ ಮನೆಯ ಬಳಿಯಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ಚಿನ್ನದ ಸರವನ್ನು ಕಸಿದುಕೊಂಡು ಹೋದ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ತನಿಖೆಗಾಗಿ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.