ನವದೆಹಲಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯಕ್ಕೆ ಸದ್ಯ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಮತ್ತೆ ಇಂದು ವಿವಿಧ ವಿಮಾನ ನಿಲ್ದಾಣಗಳಲ್ಲಿ 450 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಭಾರತವು ಹಿಂದೆಂದೂ ಕಂಡಿರದ ಪ್ರಮಾಣದ ವಿಮಾನ ಪ್ರಯಾಣ ಬಿಕ್ಕಟ್ಟಿನಲ್ಲಿ ಸತತ ಏಳನೇ ದಿನವೂ ಅಡಚಣೆಗಳು ಮುಂದುವರೆದಿವೆ.ದೆಹಲಿ ವಿಮಾನ ನಿಲ್ದಾಣದಲ್ಲಿ, 134 ಇಂಡಿಗೋ ವಿಮಾನಗಳು – 75 ನಿರ್ಗಮನ ಮತ್ತು 59 ಆಗಮನ – ಇಂದು ರದ್ದಾಗಿವೆ, ಆದರೆ ಬೆಂಗಳೂರು ವಿಮಾನ ನಿಲ್ದಾಣವು 127 ರದ್ದತಿಗಳನ್ನು ವರದಿ ಮಾಡಿದೆ. ಚೆನ್ನೈನಲ್ಲಿ 71 ವಿಮಾನಗಳು, ಹೈದರಾಬಾದಲ್ಲಿ 77 ಮತ್ತು ಜಮ್ಮುವಿನಲ್ಲಿ 20 ವಿಮಾನಗಳು ರದ್ದಾಗಿವೆ.
ಅಹಮದಾಬಾದಲ್ಲಿ 20 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ವೈಜಾಗ್ನಲ್ಲಿ ಏಳು ವಿಮಾನಗಳ ಹಾರಾಟ ರದ್ದಾಗಿದೆ. ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಇತರ ಪ್ರಮುಖ ವಿಮಾನ ನಿಲ್ದಾಣಗಳು ಸಹ ಗಮನಾರ್ಹ ಅಡಚಣೆಗಳನ್ನು ಅನುಭವಿಸಿವೆ. ಬೆಳಿಗ್ಗೆ 10.30 ರ ಹೊತ್ತಿಗೆ ಒಟ್ಟು 456 ವಿಮಾನಗಳ ಹಾರಾಟ ರದ್ದತಿಯಾಗಿದೆ.