ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಕುವೈತ್ ಕಡೆಗೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಎಚ್ಚರಿಕೆಯಿಂದ ಇರಬೇಕೆಂದು ಅಲ್ಲಿನ ಆಡಳಿತ ಜನತೆಗೆ ಸೂಚನೆ ನೀಡಿದೆ. ಬಹ್ರೇನ್‌ನಲ್ಲಿಯೂ ಅಪಾಯದ ಸೈರನ್ ಮೊಳಗಿರುವುದಾಗಿ ವರದಿಯಾಗಿದೆ. ಅಮೆರಿಕದ ದಾಳಿಗೆ ತಕ್ಕ ಪ್ರತೀಕಾರ ನೀಡುವುದಾಗಿ ಇರಾನ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲೇ ಈ ದಾಳಿಗಳು ನಡೆದಿವೆ.

ಸುಮಾರು ಎರಡು ವಾರಗಳ ಬಳಿಕ ಗಲ್ಫ್ ಪ್ರದೇಶದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಮೂರು ಹಡಗುಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ದಕ್ಷಿಣ ಇರಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಮೆರಿಕ ತೀವ್ರ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿತ್ತು.
ಇದಕ್ಕೆ ಪ್ರತಿಯಾಗಿ ಇರಾನ್ ಮತ್ತೆ ಗಲ್ಫ್ ಪ್ರದೇಶದತ್ತ ದಾಳಿ ನಡೆಸಲು ಪ್ರಯತ್ನಿಸುತ್ತಿದೆ ಎಂಬ ಸೂಚನೆಗಳು ಲಭ್ಯವಾಗಿವೆ. ಸುಮಾರು ಒಂದೂವರೆ ಗಂಟೆಗಳ ಕಾಲ ಬಹ್ರೇನ್ ಮತ್ತು ಕುವೈತ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವರದಿಗಳು ತಿಳಿಸಿವೆ.


