ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡಿ ಮಧ್ಯಪ್ರಾಚ್ಯ ಬಿಕ್ಕಟ್ಟು, ಉಕ್ರೇನ್ ಯುದ್ಧ, ಸುಡಾನ್ ಸೇರಿದಂತೆ ಪ್ರಮುಖ ಜಾಗತಿಕ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು. 2028-29ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ತಾತ್ಕಾಲಿಕ ಸದಸ್ಯತ್ವಕ್ಕಾಗಿ ಭಾರತದ ಅಧಿಕೃತ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಈ ಭೇಟಿ ನಡೆದಿದೆ.

ಮಾತುಕತೆ ವೇಳೆ ವಿಶ್ವಸಂಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಹಾಗೂ ಸಾಂಸ್ಥಿಕ ಸುಧಾರಣೆಗಳ ಅಗತ್ಯವನ್ನು ಜೈಶಂಕರ್ ಒತ್ತಿ ಹೇಳಿದ್ದು, ಭಾರತ–ವಿಶ್ವಸಂಸ್ಥೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಗಿದೆ. ಬಳಿಕ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ಜಾಗತಿಕ ಸವಾಲುಗಳಿಗೆ ರಾಜತಾಂತ್ರಿಕತೆ ಮತ್ತು ಸಂವಾದವೇ ಪರಿಹಾರ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದರು.

2028-29ರ ಯುಎನ್‌ಎಸ್‌ಸಿ ಅವಧಿಗೆ ಭಾರತ ಜಾಗತಿಕ ದಕ್ಷಿಣದ ರಾಷ್ಟ್ರಗಳ ಧ್ವನಿಯಾಗುವುದು, ಬಹುಪಕ್ಷೀಯ ವ್ಯವಸ್ಥೆಯಲ್ಲಿ ಸುಧಾರಣೆ, ಶಾಂತಿಪಾಲನಾ ಕಾರ್ಯಾಚರಣೆಗಳ ಬಲವರ್ಧನೆ, ಕೃತಕ ಬುದ್ಧಿಮತ್ತೆ ದುರುಪಯೋಗ ತಡೆ, ಸಮುದ್ರ ಭದ್ರತೆ ಹಾಗೂ ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆಯುವ ವಿಚಾರಗಳಿಗೆ ಆದ್ಯತೆ ನೀಡಲಿದೆ ಎಂದು ಜೈಶಂಕರ್ ತಿಳಿಸಿದರು.

2028-29ರ ಯುಎನ್‌ಎಸ್‌ಸಿ ತಾತ್ಕಾಲಿಕ ಸದಸ್ಯತ್ವಕ್ಕಾಗಿ ನಡೆಯುವ ಚುನಾವಣೆಯಲ್ಲಿ ಭಾರತ ಏಷ್ಯಾ-ಪೆಸಿಫಿಕ್ ವಿಭಾಗದ ಏಕೈಕ ಸ್ಥಾನಕ್ಕಾಗಿ ತಜಿಕಿಸ್ತಾನದೊಂದಿಗೆ ಸ್ಪರ್ಧಿಸಲಿದ್ದು, ಚುನಾವಣೆ ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿದೆ. ಭಾರತ ಈ ಹಿಂದೆ ಎಂಟು ಬಾರಿ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಕಾರ್ಯನಿರ್ವಹಿಸಿದೆ.


