ಅಮೆರಿಕ ಮಧ್ಯಂತರ ಚುನಾವಣೆ: ಜನಪ್ರತಿನಿಧಿಗಳ ಸಭೆಯ 36 ಸ್ಥಾನಗಳಲ್ಲಿ ಡೆಮಾಕ್ರಾಟ್‌ಗಳಿಗೆ ಗೆಲುವು; ಸೆನೆಟ್‌ನಲ್ಲೂ ಮುನ್ನಡೆ

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಜನಪ್ರತಿನಿಧಿಗಳ ಸಭೆಯ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) 36 ಸ್ಥಾನಗಳಲ್ಲಿ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದೆ. ರಿಪಬ್ಲಿಕನ್ ಪಕ್ಷ 15 ಸ್ಥಾನಗಳನ್ನು ಗೆದ್ದುಕೊಂಡಿದೆ.ಉತ್ತರ ಕೆರೊಲಿನಾದ ಸೆನೆಟ್ ಚುನಾವಣೆಯಲ್ಲಿ ಮಾಜಿ ಡೆಮಾಕ್ರಟಿಕ್ ಗವರ್ನರ್ ರಾಯ್ ಕೂಪರ್ ಅವರು ಅಚ್ಚರಿಯ ಗೆಲುವು ದಾಖಲಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ.

ಸೆನೆಟ್ ಚುನಾವಣೆಯಲ್ಲಿ ಈವರೆಗೆ 11 ಡೆಮಾಕ್ರಟಿಕ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದ 20 ಸ್ಥಾನಗಳ ಪೈಕಿ ಇನ್ನೂ ಆರು ಸ್ಥಾನಗಳನ್ನು ಡೆಮಾಕ್ರಾಟ್‌ಗಳು ಗೆದ್ದರೆ, 100 ಸದಸ್ಯ ಬಲದ ಸೆನೆಟ್‌ನಲ್ಲಿ ಬಹುಮತ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಇಲಿನಾಯ್ಸ್‌ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೂಲಿಯಾನಾ ಸ್ಟ್ರಾಟನ್ ಗೆಲುವು ಸಾಧಿಸುವ ಮೂಲಕ ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂವರು ಕಪ್ಪು ವರ್ಣೀಯ ಮಹಿಳೆಯರು ಏಕಕಾಲದಲ್ಲಿ ಸೆನೆಟ್‌ನಲ್ಲಿ ಕಾರ್ಯನಿರ್ವಹಿಸುವಂತಾಗಿದೆ.ಈ ಹಿಂದೆ ಆಯ್ಕೆಯಾಗಿದ್ದ ಡೆಲವೇರ್‌ನ ಸೆನೆಟರ್ ಲಿಸಾ ಬ್ಲಂಟ್ ರೋಚೆಸ್ಟರ್ ಮತ್ತು ಮೇರಿಲ್ಯಾಂಡ್‌ನ ಸೆನೆಟರ್ ಏಂಜೆಲಾ ಆಲ್ಸೊಬ್ರೂಕ್ಸ್ ಅವರೊಂದಿಗೆ ಜೂಲಿಯಾನಾ ಸ್ಟ್ರಾಟನ್ ಕೂಡ ಸೇರಲಿದ್ದಾರೆ.

ಇದೇ ವೇಳೆ, ಕೊಲೊರಾಡೋದಿಂದ ಡೆಮಾಕ್ರಟಿಕ್ ಅಭ್ಯರ್ಥಿ ಜಾನ್ ಹಿಕ್ಕನ್‌ಲೂಪರ್ ಹಾಗೂ ನ್ಯೂ ಮೆಕ್ಸಿಕೋದಿಂದ ಬೆನ್ ರೇ ಲುಜಾನ್ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!