ಟಿವಿಕೆಗೆ ಸರ್ಕಾರ ರಚನೆಗೆ ಆಹ್ವಾನಿಸದಿದ್ದರೆ ರಾಜಭವನಕ್ಕೆ ಮುತ್ತಿಗೆ: ಕಾಂಗ್ರೆಸ್ ಎಚ್ಚರಿಕೆ

ಚೆನ್ನೈ: ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ 2026ದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬೆನ್ನಲ್ಲೇ, ಸರ್ಕಾರ ರಚನೆ ವಿಚಾರ ರಾಜಕೀಯ ತೀವ್ರತೆ ಪಡೆದುಕೊಂಡಿದೆ.

ತಮಿಳುನಾಡು ರಾಜ್ಯಪಾಲರು ಟಿವಿಕೆಗೆ ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಮಧುರೈ ಕಾರ್ಪೊರೇಷನ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಲ್ಲಮಣಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಮಧುರೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ರಚನೆಯ ಮೊದಲ ಹಂತದಿಂದಲೇ ರಾಜ್ಯಪಾಲರು ಟಿವಿಕೆಗೆ ಅಡ್ಡಿಯಾಗುತ್ತಿದ್ದಾರೆ. ತಮಿಳುನಾಡಿನ ರಾಜ್ಯಪಾಲರು ಬಿಜೆಪಿಯ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಆರೋಪಿಸಿದರು.

“ಸಂವಿಧಾನ ಮತ್ತು ಕಾನೂನಿನ ಪ್ರಕಾರ ಅತಿದೊಡ್ಡ ಪಕ್ಷವಾಗಿರುವ ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು. ರಾಜ್ಯಪಾಲರು ತಮಿಳಗ ವೆಟ್ರಿ ಕಳಗಂಗೆ ಅವಕಾಶ ನೀಡದಿದ್ದರೆ, ಕಾಂಗ್ರೆಸ್ ಪಕ್ಷ ರಾಜಭವನಕ್ಕೆ ಮುತ್ತಿಗೆ ಹಾಕಲಿದೆ” ಎಂದು ನಲ್ಲಮಣಿ ಎಚ್ಚರಿಸಿದರು.

“ಸರ್ಕಾರ ರಚನೆಯನ್ನು ತಡೆಯಲು ಬಿಜೆಪಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಬಹುಮತ ಸಾಬೀತುಪಡಿಸುವ ಸ್ಥಳ ರಾಜಭವನವಲ್ಲ, ವಿಧಾನಸಭೆ. ಆದ್ದರಿಂದ ರಾಜ್ಯಪಾಲರು ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಬೇಕು” ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಮಧುರೈನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಟಿವಿಕೆ ಸರ್ಕಾರ ರಚನೆಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯಪಾಲರ ನಡೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಲ್ಲಮಣಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಮಧುರೈನ ಝಾನ್ಸಿ ರಾಣಿ ಪಾರ್ಕ್ ಸಮೀಪ ಈ ಪ್ರತಿಭಟನೆ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!