ಸಿ. ಜೋಸೆಫ್ ವಿಜಯ್ ಅವರು ಭಾನುವಾರ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು. ಜವಾಹರಲಾಲ್ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರು ಹುದ್ದೆ ಮತ್ತು ಗೌಪ್ಯತಾ ಪ್ರಮಾಣವಚನ ಬೋಧಿಸಿದರು.
“ತಳಪತಿ” ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ವಿಜಯ್ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಸಂಭ್ರಮಿಸಿದರು. ಕೆಲ ಅಭಿಮಾನಿಗಳು ಭಾವುಕರಾಗಿ ಕಣ್ಣೀರಿಟ್ಟ ದೃಶ್ಯಗಳೂ ಕಂಡುಬಂದವು. ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಪ್ಪು ಬ್ಲೇಜರ್ ಹಾಗೂ ಕಪ್ಪು ಪ್ಯಾಂಟ್ ಧರಿಸಿ ವೇದಿಕೆಗೆ ಆಗಮಿಸಿದ ವಿಜಯ್, “ಸಿ. ಜೋಸೆಫ್ ವಿಜಯ್ ಎನ್ನುವ ನಾನು…” ಎಂದು ಪ್ರಮಾಣವಚನ ಆರಂಭಿಸುತ್ತಿದ್ದಂತೆ ಸ್ಟೇಡಿಯಂ ಚಪ್ಪಾಳೆ ಹಾಗೂ ಘೋಷಣೆಗಳಿಂದ ಮೊಳಗಿತು.
ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (TVK) ಯಾವುದೇ ಮೈತ್ರಿಯಿಲ್ಲದೆ 233 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಧುತಲೈ ಚಿರುತೈಗಳ್ ಕಚ್ಚಿ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆಗೆ ಮುಂದಾಯಿತು.
ರಾಜ್ಯಪಾಲರು ಶನಿವಾರ ಸಂಜೆ ವಿಜಯ್ ಅವರನ್ನು ಮುಖ್ಯಮಂತ್ರಿ ಆಗಿ ನೇಮಕ ಮಾಡಿ, ಮೇ 13ರೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಿದ್ದರು.
ವಿಜಯ್ ನೇತೃತ್ವದ ಸರ್ಕಾರ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದು, ಕಳೆದ ಐದು ದಶಕಗಳಿಂದ ರಾಜ್ಯ ರಾಜಕೀಯವನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪರ್ಯಾಯವಾಗಿ ಟಿವಿಕೆ ಹೊರಹೊಮ್ಮಿದೆ.
2024ರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದ ವಿಜಯ್, ಭ್ರಷ್ಟಾಚಾರ ಹಾಗೂ ಜಾತಿ-ಧರ್ಮ ಆಧಾರಿತ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸಿ ಯುವಜನತೆ ಮತ್ತು ಸಿನಿ ಅಭಿಮಾನಿಗಳಲ್ಲಿ ಹೊಸ ರಾಜಕೀಯ ಚೈತನ್ಯ ಮೂಡಿಸಿದ್ದರು. ಕೇವಲ ಎರಡು ವರ್ಷದ ಪಕ್ಷವಾಗಿದ್ದರೂ ಟಿವಿಕೆ ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.