ಇನ್ನು ವರ್ಷಕ್ಕೆ ಕೇವಲ 4 ಎಲ್ಪಿಜಿ ಸಿಲಿಂಡರ್ಗಳಿಗೆ ಮಾತ್ರ ಸಹಾಯಧನ
ನವದೆಹಲಿ, ಜೂನ್ 9: ಗೃಹಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಇತ್ತೀಚೆಗೆ ₹29 ಹೆಚ್ಚಿಸಿರುವ ಕೇಂದ್ರ ಸರ್ಕಾರ, ಇದೀಗ ಪ್ರಧಾನ ಮಂತ್ರಿ ಉಜ್ಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು ಮತ್ತಷ್ಟು ಕಡಿತಗೊಳಿಸಿದೆ.
ಯೋಜನೆ ಆರಂಭವಾದಾಗ ಫಲಾನುಭವಿಗಳಿಗೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್ಗಳ ಸೌಲಭ್ಯ ನೀಡಲಾಗುತ್ತಿತ್ತು. ಬಳಿಕ ಈ ಸಂಖ್ಯೆಯನ್ನು 9ಕ್ಕೆ ಇಳಿಸಲಾಗಿತ್ತು. ಇದೀಗ ಹೊಸ ನಿಯಮದ ಪ್ರಕಾರ ವರ್ಷಕ್ಕೆ ಕೇವಲ 4 ಸಿಲಿಂಡರ್ಗಳಿಗೆ ಮಾತ್ರ ಸಬ್ಸಿಡಿ ದೊರೆಯಲಿದೆ.
ಪ್ರಸ್ತುತ ಕೇಂದ್ರ ಸರ್ಕಾರ ಉಜ್ಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್ಗೆ ₹300 ಸಬ್ಸಿಡಿ ನೀಡುತ್ತಿದೆ. ಆದರೆ ಹೊಸ ನಿಯಮ ಜಾರಿಗೆ ಬಂದ ಹಿನ್ನೆಲೆಯಲ್ಲಿ, ವರ್ಷದಲ್ಲಿ ನಾಲ್ಕು ಸಿಲಿಂಡರ್ಗಳ ಬಳಿಕ ಖರೀದಿಸುವ ಎಲ್ಲಾ ಸಿಲಿಂಡರ್ಗಳಿಗೆ ಗ್ರಾಹಕರು ಸಂಪೂರ್ಣ ಮಾರುಕಟ್ಟೆ ದರವನ್ನು ಪಾವತಿಸಬೇಕಾಗುತ್ತದೆ.
ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯಲ್ಲಿ ಆಗಿರುವ ಈ ಕಡಿತವು ದೇಶದ ಲಕ್ಷಾಂತರ ಉಜ್ಜ್ವಲ ಯೋಜನೆ ಫಲಾನುಭವಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಾಸಿಕ ವೆಚ್ಚದಲ್ಲಿ ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಅಡುಗೆ ಅನಿಲದ ಬೆಲೆ ಏರಿಕೆಯ ನಡುವೆಯೇ ಸಬ್ಸಿಡಿ ಸೌಲಭ್ಯವನ್ನು ಮತ್ತಷ್ಟು ಸೀಮಿತಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿವಿಧ ವಲಯಗಳಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.