ನವದೆಹಲಿ, ಜೂ.10: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ನಿರಂತರವಾಗಿ ಅಧಿಕಾರ ನಡೆಸಿದ ಪ್ರಧಾನಿಯಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ನಿರಂತರ ಆಡಳಿತದ ದಾಖಲೆಯನ್ನು ಹಿಂದಿಕ್ಕಿ 4,399 ದಿನಗಳ ಸೇವೆಯ ಮೈಲುಗಲ್ಲು ತಲುಪಿದ್ದಾರೆ.
2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೋದಿ ಅವರು, ಮಂಗಳವಾರಕ್ಕೆ 4,399 ದಿನಗಳ ನಿರಂತರ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಕಳೆದ 64 ವರ್ಷಗಳಿಂದ ಅಚ್ಚಳಿಯದೆ ಉಳಿದಿದ್ದ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ.
ಜವಾಹರಲಾಲ್ ನೆಹರೂ ಅವರು 1952ರ ಮೇ 13ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ದೇಶವನ್ನು ಮುನ್ನಡೆಸಿದ್ದರು. ಈ ದಾಖಲೆಯು ಇಂದಿನವರೆಗೂ ಅಜೇಯವಾಗಿಯೇ ಉಳಿದಿತ್ತು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮೂರನೇ ಅತಿ ದೀರ್ಘಾವಧಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ದಾಖಲೆಯನ್ನೂ ಹಿಂದಿಕ್ಕಿದ್ದರು. ಇಂದಿರಾ ಗಾಂಧಿ ಅವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ 4,077 ದಿನಗಳ ಕಾಲ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಇದರ ನಡುವೆಯೇ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 12 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ದೇಶಾದ್ಯಂತ ವಿಶೇಷ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂನ್ 5ರಿಂದ 21ರವರೆಗೆ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸಾಧನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸುದ್ದಿಗೋಷ್ಠಿ ಮತ್ತು ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪಕ್ಷದ ರಾಷ್ಟ್ರೀಯ ನಾಯಕತ್ವ ಸೂಚನೆ ನೀಡಿದೆ