ತಿರುವನಂತಪುರ : ಭಾರತೀಯ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ ರಿಂಕು ಸಿಂಗ್. ತನ್ನದೇ ಆದ ವಿಶಿಷ್ಟ ಶೈಲಿಯ ಪ್ರತಿಭಾನ್ವಿತ ಆಟಗಾರ. ಮಾತ್ರವಲ್ಲ ತಂಡದ ಹೆಸರನ್ನು ಕೆಲ ಸಂದರ್ಭದಲ್ಲಿ ದಡ ಸೇರಿಸಿದ ಕ್ರೀಡಾಪಟು. 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗ.
ಆದರೆ ಇದೀಗ ಎಲ್ಲಾ ಮಾಧ್ಯಮಗಳಲ್ಲೂ ಇವರ ಸಾಧನೆಯ ಸಚಿತ್ರ ವರದಿ ನೀರಿನಂತೆ ಹರಿಯುತ್ತಿದೆ ಆಶ್ಚರ್ಯವೆಂದರೆ ಈ ಎಲ್ಲಾ ವರದಿ ಇವರ ಕ್ರೀಡಾ ಸಾಧನೆಗೆ ಅಲ್ಲ…. ಬದಲಾಗಿ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೇಸಿಕ್ ಎಜುಕೇಷನ್ ಆಫೀಸರ್ (BEO) ಆಗಿ ಇವರು ನೇಮಕ ಗೊಂಡಿದ್ದು.
ನಿಜ ಇದರಲ್ಲಿ ಏನಿದೆ ಆಶ್ಚರ್ಯ ಅಂತೀರಾ? ರಿಂಕು ಸಿಂಗ್ ಇವರ ವಿದ್ಯಾರ್ಹತೆ ಕೇವಲ 9ನೇ ತರಗತಿ. ಇಂತಹ ಉನ್ನತ ಹುದ್ದೆಗೆ ಬೇಕಾಗಿರುವ ಸಾಮಾನ್ಯ ವಿದ್ಯಾರ್ಹತೆ ಪದವಿ ಶಿಕ್ಷಣ. ಆದರೆ ಕನಿಷ್ಠಪಕ್ಷ ಹತ್ತನೇ ತರಗತಿಯನ್ನು ಪೂರ್ತಿ ಗೊಳಿಸದ ಇವರನ್ನು ಇಂತಹ ಹುದ್ದೆಗೆ ನೇಮಕ ಮಾಡಿದ್ದಲ್ಲಿ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೇಗಿರಬಹುದು? ಎಂಬುದು ಚಿಂತಕರ ಪ್ರಶ್ನೆ.
ಇವರ ಈ ನೇಮಕ ಅಂತರಾಷ್ಟ್ರೀಯ ಪದಕ ವಿಜೇತರ ನೇರ ನೇಮಕಾತಿ ನಿಯಮ 2022 ರ ಅಡಿಯಲ್ಲಿ ನಡೆದಿದೆಯಂತೆ. ಇವರ ನೇಮಕಾತಿ ಕ್ರೀಡಾ ಕ್ಷೇತ್ರಕ್ಕೆ ನೀಡಿದ ಮಾನ್ಯತೆಯೆಂದು ಸರಕಾರ ಸಮರ್ಥನೆ ಮಾಡಿದರೂ, ಎಷ್ಟೋ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಡಿದ ಘೋರ ಅನ್ಯಾಯವಾಗಿದೆ. ರಿಂಕು ಸಿಂಗ್ ಅವರ ಕ್ರೀಡಾ ಸಾಧನೆಗೆ ಬೇರೆ ರೀತಿಯ ಗೌರವ ನೀಡಬಹುದಿತ್ತು. ಆದರೆ ರಾಜಕೀಯ ಎಂಬ ಚದುರಂಗಾಟದಲ್ಲಿ ಯಾವುದು ಅಸಾಧ್ಯವೂ ಅದು ಸಾಧ್ಯವಾಗುತ್ತದೆ.
ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದರೆಂಬ ಒಂದೇ ಕಾರಣಕ್ಕೆ ಸಮಾಜದ ಹಾಗೂ ದೇಶದ ಭವಿಷ್ಯವನ್ನ ನಿರ್ಧರಿಸುವ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಉನ್ನತ ಹುದ್ದೆಯನ್ನು ಕನಿಷ್ಠ ವಿದ್ಯಾರ್ಹತೆ ಇಲ್ಲದವರಿಗೆ ನೀಡುವುದು ಕೊಳಚೆ ನೀರಿಗೆ ಕಲ್ಲು ಎಸೆದಂತೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಂಸದೆ. ಪ್ರಿಯಾ ಸರೋಜ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥವು ಇವರ ನೇಮಕಕ್ಕೆ ಪೂರಕವಾಯಿತು.
ಕನಿಷ್ಠಪಕ್ಷ ಹತ್ತನೇ ತರಗತಿಯನ್ನು ಪೂರ್ತಿ ಮಾಡದ ರಿಂಕು ಸಿಂಗ್ ರನ್ನು ಈ ಉನ್ನತ ಹುದ್ದೆಗೆ ನೇಮಕ ಮಾಡಿದ್ದು, ಉತ್ತರ ಪ್ರದೇಶದ ಯೋಗಿ ಸರಕಾರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿ ಗಳನ್ನು ಪೂರ್ತಿ ಗೊಳಿಸಿ , ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಉದ್ಯೋಗ ಅರಸುತ್ತಿರುವ ಅದೆಷ್ಟೋ ಉದ್ಯೋಗಾಂಕ್ಷಿಗಳನ್ನು ನಿರುತ್ಸಾಹ ಗೊಳಿಸುವ ಘಟನೆ ಇದಾಗಿದೆ. ಕ್ರೀಡಾ ಸಾಧನೆಯ ಜೊತೆಗೆ ರಾಜಕೀಯ ಪ್ರಭಾವವು ಇವರ ನೇಮಕದ ಹಿಂದೆ ಕೆಲಸ ಮಾಡಿದೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ. ಅದೇನೇ ಇದ್ದರೂ ವಿದ್ಯಾವಂತರಿಗೆ ಮೋಸ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇಂತಹ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಬೇಕಾಗಿದೆ.