ಅಂಗಾಂಗ ಕಸಿ ಅಂಕಿ-ಅಂಶ ಬಹಿರಂಗಪಡಿಸಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದ NOTTO ಸಂಸ್ಥೆ
ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದ ಬೆನ್ನಲ್ಲೇ ದೇಶದಲ್ಲಿ ವಿಶೇಷವಾಗಿ ಮೂತ್ರಪಿಂಡ(ಕಿಡ್ನಿ) ಕಸಿ ಸೇರಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳ ಯಶಸ್ವಿನ ಪ್ರಮಾಣ, ಮೂತ್ರಪಿಂಡ ಕಸಿ ವೈಫಲ್ಯ, ದೀರ್ಘಕಾಲಿಕ ಪರಿಣಾಮ ಹಾಗೂ ಸಾವಿನ ಪ್ರಮಾಣದ ಬಗ್ಗೆ ದೇಶದ ಸಂಬಂಧಪಟ್ಟ ಎಲ್ಲ ಆಸ್ಪತ್ರೆಗಳು ಮಾಹಿತಿ ಒದಗಿಸಬೇಕೆಂದು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ(National Organ and Tissue Transplant Registry-NOTTO)ಯು ನಿರ್ದೇಶನ ನೀಡಿದೆ.
ಮೂತ್ರಪಿಂಡ ಕಸಿ ಸಂಬಂಧ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಮಾಹಿತಿ ಕೊರತೆಯಿದೆ. ರೋಗಿಗಳು ಹಾಗೂ ಅವರ ಕುಟುಂಬಸ್ಥರಿಂದ ಮೂತ್ರಪಿಂಡ ಕಸಿಗೆ ಒಪ್ಪಿಗೆ ಪಡೆಯುವುದಕ್ಕೂ ಮೊದಲು ಅವರಿಗೆ ಕಸಿ ಶಸ್ತ್ರಚಿಕಿತ್ಸೆ ಬಗ್ಗೆ ಸರಿಯಾದ ಮಾಹಿತಿ, ಅದರ ಸಕ್ಸಸ್ ರೇಟ್, ಸಾವಿನ ಪ್ರಮಾಣ, ಕಸಿ ನಂತರದ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಸರಿಯಾದ ಅಂಕಿ-ಅಂಶ ಲಭ್ಯವಿರಬೇಕು. ಈ ಹಿನ್ನಲೆ ಮೂತ್ರಪಿಂಡ ಸೇರಿದಂತೆ ಅಂಗಾಂಗ ಕಸಿ ಮಾಡುವ ಆಸ್ಪತ್ರೆಗಳಿಗೆ ಎಲ್ಲ ಬಗೆಯ ಡೇಟಾ ಸಂಗ್ರಹಿಸಿ ಅದನ್ನು ವೆಬ್ಸೈಟ್ನಲ್ಲಿ ಪ್ರಕಟಿಸುವುದಕ್ಕೆ ಸೂಚನೆ ನೀಡುವಂತೆ ಕೋರಿ ಸಂಸದ ಕ್ಯಾ. ಚೌಟ ಅವರು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಕಳೆದ ಮೇ 22ರಂದು ಪತ್ರ ಬರೆದಿದ್ದರು. ಅದರಂತೆ ‘ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ’ (NOTTO) ನಿರ್ದೇಶಕ ಡಾ. ಅನಿಲ್ ಕುಮಾರ್ ಅವರು ಜೂ.19ರಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಇದೀಗ ಕ್ಯಾ. ಚೌಟ ಅವರ ಪತ್ರ ಆಧರಿಸಿ NOTTO ನಿರ್ದೇಶಕರು ಮೂತ್ರಪಿಂಡ ಕಸಿ ಸೇರಿ ಅಂಗಾಂಗ ಕಸಿ ಮಾಡುವ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.
ದೇಶದ ಅಂಗಾಂಗ ಕಸಿ ಸೆಂಟರ್ಗಳು ರೋಗಿಯ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಅಂಕಿ-ಅಂಶಗಳನ್ನು ತಮ್ಮ ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು. ಪ್ರತಿಯೊಂದು ಅಂಗಕಸಿ ಕೇಂದ್ರಗಳು ಅಂಗ ಕಸಿ ನಂತರದ ರೋಗಿಯ ಪ್ರತಿ ಹಂತದ ಅಂಕಿ-ಅಂಶದ ಸಮಗ್ರ ವರದಿ ಹಾಗೂ ಫಾಲೋಅಪ್ ಡೇಟಾವನ್ನು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗೆ ಕಳುಹಿಸಬೇಕೆಂದು ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ.
ಆಸ್ಪತ್ರೆಗಳು ಯಾವುದೇ ಅಂಗಾಂಶ ಕಸಿ ಮಾಡುವುದಕ್ಕೂ ಮೊದಲು ರೋಗಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸಬೇಕು. ಒಂದುವೇಳೆ ಕಸಿ ಮಾಡಿದ ಬಳಿಕ ಏನೆಲ್ಲ ಪರಿಣಾಮ ಎದುರಾಗಬಹುದು ಹಾಗೂ ಅಂಗಕಸಿ ಮಾಡುವುದರಿಂದ ಯಾವ ರೀತಿಯ ರಿಸ್ಕ್ ಎದುರಾಗಬಹುದು ಎಂಬ ಬಗ್ಗೆಯೂ ರೋಗಿ ಹಾಗೂ ಅವರ ಕುಟುಂಬಸ್ಥರ ಜತೆಗೆ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳಬೇಕೆಂದು ಸೂಚಿಸಲಾಗಿದೆ. ಸಂಸದ ಕ್ಯಾ. ಚೌಟ ಅವರು ಈ ರೀತಿಯ ಮಾಹಿತಿ ಹಾಗೂ ಅಂಕಿ-ಅಂಶ ಹಂಚಿಕೊಳ್ಳುವುದರ ನಡುವಿನ ಮಾಹಿತಿ ಸಂವಹನದ ಕೊರತೆಯನ್ನು ಉಲ್ಲೇಖಿಸಿ ಸಚಿವಾಲಯದ ಗಮನಸೆಳೆದಿದ್ದರು.
ದೇಶಾದ್ಯಂತ ಒಟ್ಟು 824 ಅಂಗಕಸಿ ಸೆಂಟರ್ಗಳು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಜತೆ ಸಂಯೋಜನೆ ಹೊಂದಿದೆ. ಆಸ್ಪತ್ರೆಗಳು ಈ ರೀತಿ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಮೂತ್ರಪಿಂಡ ಕಸಿ ಚಿಕಿತ್ಸೆ ಬಗ್ಗೆ ಸಾರ್ವಜನಿಕವಾಗಿ ಹೆಚ್ಚಿನ ಪಾರದರ್ಶಕತೆ ಕಾಪಾಡಬಹುದು. ಜತೆಗೆ, ಮಾಹಿತಿ ಕೊರತೆಯಿಂದಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘಕಾಲಿಕ ತೊಂದರೆಗೆ ಒಳಾಗುವ ಸಮಸ್ಯೆಯಿಂದಲೂ ತಪ್ಪಿಸಿಕೊಳ್ಳಬಹುದು. ಆ ಮೂಲಕ ಮೂತ್ರಪಿಂಡ ಕಸಿ ಚಿಕಿತ್ಸೆ ಯಶಸ್ಸು ಹಾಗೂ ಸಾವಿನ ಪ್ರಮಾಣದ ಬಗ್ಗೆಯೂ ಜಾಗೃತಿ ಮೂಡಿಸಬಹುದು ಎನ್ನುವುದು ಸಂಸದ ಕ್ಯಾ. ಚೌಟ ಅವರು ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು ಎಚ್ಚರಿಸಿರುವುದರ ಹಿಂದಿನ ಉದ್ದೇಶವಾಗಿತ್ತು. ಮಂಗಳೂರಿನ ಪ್ರಮುಖ ನಾಗರಿಕರಾದ ಶ್ಯಾಮ್ ಕಾಮತ್ ಮತ್ತು ಡಾ. ಲಿಯೋನೆಲ್ ಡಿಸೋಜಾ ಅವರು ಸಿದ್ಧಪಡಿಸಿದ್ದ ಸಮಗ್ರ ವರದಿಯನ್ನು ಆಧರಿಸಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದರು.