ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಅಡಚಣೆ: ಫಡ್ನವೀಸ್‌ಗೆ ನಿಯೋಗ ಮನವಿ

ಕಾನೂನುಬದ್ಧ ವಾಹನಗಳಿಗೆ ತೊಂದರೆ ಆಗದಂತೆ ಕ್ರಮದ ಭರವಸೆ

ದೆಹಲಿ : ಮಹಾರಾಷ್ಟ್ರ ರಾಜ್ಯದಲ್ಲಿ ಕಾನೂನುಬದ್ಧವಾಗಿ ಸಾಗಣೆಯಾಗುತ್ತಿರುವ ಅಡಿಕೆ ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ನಿಯೋಗ ಭೇಟಿ ಮಾಡಿ, ರೈತರು, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು. ದಕ್ಷಿಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಿಕೆಯು ಸಾವಿರಾರು ರೈತರ ಜೀವನಾಧಾರವಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಅಡಿಕೆ ಸಾಗಾಟ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಅಡಿಕೆ ಸಾಗಣೆ ವಾಹನಗಳಿಗೆ ಅನಗತ್ಯ ತಪಾಸಣೆ, ವಿಳಂಬ ಹಾಗೂ ಸಂಚಾರದ ಅಡಚಣೆಗಳು ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಇದರಿಂದ ರೈತರು, ವ್ಯಾಪಾರಿಗಳು, ಸಾಗಣಿದಾರರು ಹಾಗೂ ಅಡಿಕೆ ಆಧಾರಿತ ವ್ಯಾಪಾರ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ನಿಯೋಗ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.


ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗಣೆಯಾಗುತ್ತಿರುವ ಅಡಿಕೆ ವಾಹನಗಳಿಗೆ ಯಾವುದೇ ರೀತಿಯ ಅನಗತ್ಯ ತೊಂದರೆ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಂತರರಾಜ್ಯ ವ್ಯಾಪಾರಕ್ಕೆ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ರೈತರು ಮತ್ತು ವ್ಯಾಪಾರಿಗಳ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ನಿಯೋಗ ಮನವಿ ಮಾಡಿತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿಷಯದ ಗಂಭೀರತೆಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನುಬದ್ಧವಾಗಿ ಸಾಗಣೆಯಾಗುತ್ತಿರುವ ಅಡಿಕೆ ವಾಹನಗಳ ಸಂಚಾರಕ್ಕೆ ಯಾವುದೇ ಅನಗತ್ಯ ಅಡಚಣೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದ ಬಿ.ವೈ. ರಾಘವೇಂದ್ರ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು,ಶಾಸಕ ಆರಗ ಜ್ಞಾನೇಂದ್ರ ಅಡಿಕೆ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಡಿಕೆ ವಲಯದ ಪ್ರಮುಖರು ಉಪಸ್ಥಿತರಿದ್ದು, ಅಡಿಕೆ ಸಾಗಾಟದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದರು.
ನಿಯೋಗವು, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯಗಳ ನಡುವಿನ ಸಮನ್ವಯವನ್ನು ಬಲಪಡಿಸಿ, ಅಡಿಕೆ ಸಾಗಾಟ ಸುಗಮವಾಗಿ ನಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!