ಬ್ಯಾಂಕ್ ಅಕ್ರಮ ದರೋಡೆಕೋರರಿಗೆ ಜೀವಾವಧಿ ಶಿಕ್ಷೆಗೂ ಅವಕಾಶ ಇದೆ: ನಗರ ಡಿಸಿಪಿ ರವಿಶಂಕರ್

ಮಂಗಳೂರು:ಇತ್ತೀಚಿನ ದಿನಗಳಲ್ಲಿ ಕೆಲವು ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳೇ ಅಕ್ರಮ ಚಟುವಟಿಕೆಗಳಲ್ಲಿ ಶಾಮೀಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂತಹ ಗಂಭೀರ ಪ್ರಕರಣಗಳಿಗೆ ಕಠಿಣ ಶಿಕ್ಷೆಯ ಅಗತ್ಯ ಇದೆ ಎಂದು ಮಂಗಳೂರು ನಗರ ಡಿಸಿಪಿ ರವಿಶಂಕರ್ ಎಚ್ಚರಿಕೆ ನೀಡಿದ್ದಾರೆ.

ಅವರು ಎಸ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಬ್ಯಾಂಕುಗಳು, ಕೃಷಿಯೇತರ ಬ್ಯಾಂಕುಗಳು ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೈಬರ್ ಅಪರಾಧಗಳು ಮತ್ತು ಸಹಕಾರಿ ಸಂಸ್ಥೆಗಳ ಭದ್ರತೆ ಕುರಿತ ಮಾರ್ಗಸೂಚಿಗಳ ಪಾಲನೆ ವಿಷಯದ ಮಾಹಿತಿ ಕಾರ್ಯಾಗಾರವನ್ನು ಉದ್ದೇಶಿಸಿ ಈ ಮಾಹಿತಿಯನ್ನು ನೀಡಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದೆರಡು ಪ್ರಕರಣಗಳಲ್ಲಿ ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನಾಭರಣವನ್ನು ತಮ್ಮ ಸ್ವ ಉದ್ದೇಶಗಳಿಗಾಗಿ ಬಳಸಿ ಸಿಕ್ಕಿಬಿದ್ದಿರುವುದು ವರದಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಕಾನೂನು ಇದೆ ಎಂದು ಅವರು ಸ್ಪಷ್ಟತೆ ನೀಡಿದರು.

ಬ್ಯಾಂಕ್ ದರೋಡೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಇತ್ತೀಚಿನ ಪ್ರಕರಣಗಗಳಿಂದ ಸಾಬೀತಾಗಿದೆ.ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಅಂತಾರಾಜ್ಯ ದರೋಡೆ ತಂಡ ಭಾಗಿಯಾಗಿದ್ದು, ಅದೇ ಬ್ಯಾಂಕ್ ಆಯ್ದು ಕೊಳ್ಳಲು ಕಾರಣ ಅಲ್ಲಿನ ಭದ್ರತಾ ಲೋಪಗಳು , ಭಧ್ರತಾ ಲೋಪ ದೋಷಗಳು ಇದ್ದರೆ ಅಂತಹ ಬ್ಯಾಂಕುಗಳಿಂದ ಮೌಲ್ಯಯುತ್ತ ವಸ್ತುಗಳನ್ನು ಎರಗಿಸುವುದು ಸುಲಭ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಬ್ಯಾಂಕ್ ದರೋಡೆ ಪ್ರಕರಣವನ್ನು ಪೊಲೀಸರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರಿಂದ ಗ್ರಾಹಕರು ನಿಶ್ಚಿಂತರಾಗಿ ಬ್ಯಾಂಕ್ ವ್ಯವಹಾರ ನಡೆಸಲು ಸಾಧ್ಯವಾಗಿದೆ .

“ಬ್ಯಾಂಕ್ ಗ್ರಾಹಕರು ಮತ್ತು ಸಿಬ್ಬಂದಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನಮ್ಮೊಂದಿಗೆ ಕೈಜೋಡಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಾದ ರೋಹಿಣಿ ಸಿ.ಕೆ., ಮಂಜುನಾಥ್, ಅನಿಲ್ ಕುಮಾರ್ ಮೂಲರೆಡ್ಡಿ, ಭೂಮರೆಡ್ಡಿ, ಎಸ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ನೂರಿಂಜಿ, ನಿರ್ದೇಶಕರಾದ ಶಶಿಕುಮಾರ್ ರೈ ಬೊಳ್ಕೊಟ್ಟು ಬ್ಯಾಂಕ್ ಸಿಇಒ ಗೋಪಾಲಕೃಷ್ಣ ಭಟ್, ಮೋನಪ್ಪ ಶೆಟ್ಟಿ ಎಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಗೋಪಾಲಕೃಷ್ಣ ಭಟ್ ಧನ್ಯವಾದ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!