ತೌಳವ ಚಿತ್ರರಂಗದ ‘ದಶ ಯಾತ್ರೆ’ ಸಂಭ್ರಮ- ಫೆ.11ರಿಂದ 15ರವರೆಗೆ ನೆಹರೂ ಮೈದಾನದಲ್ಲಿ ರಂಗೇರಲಿದೆ ಕ್ರಿಕೆಟ್ ಹಬ್ಬ …. !

ಮಂಗಳೂರು:ಕರಾವಳಿಯ ತುಳು ಚಿತ್ರರಂಗ ಮತ್ತು ರಂಗಭೂಮಿ ಕಲಾವಿದರ ಬಹುನಿರೀಕ್ಷಿತ ‘ದಶ ಯಾತ್ರೆ’ ಸಂಭ್ರಮೋತ್ಸವವು ಫೆಬ್ರವರಿ 11ರಿಂದ 15ರವರೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್ ಹಬ್ಬ ಹಾಗೂ ಸನ್ಮಾನ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ.)ದ ಅಧ್ಯಕ್ಷ ಲಂಚು ಲಾಲ್ ಕೆ.ಎಸ್ ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಮಿಟಿ ಸದಸ್ಯ ಜಿತೇಶ್ ಉಳಿಯ ನೀಡಿ , ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾದ ಈ ಐದು ದಿನಗಳ ಉತ್ಸವದಲ್ಲಿ ತುಳು ಚಿತ್ರರಂಗ ಮತ್ತು ರಂಗಭೂಮಿ ಕಲಾವಿದರಿಗಾಗಿ ವಿಶೇಷವಾಗಿ ‘ಕ್ರಿಕೆಟ್ ಹಬ್ಬ’ ಆಯೋಜಿಸಲಾಗಿದ್ದು, ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರಿಗೆ ಗೌರವಪೂರ್ವಕ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 7.30ರಿಂದ ರಾತ್ರಿ 11 ಗಂಟೆಯವರೆಗೆ ಪಂದ್ಯಾಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು .

ಫೆಬ್ರವರಿ 11ರಂದು ಸಂಜೆ 5.30ಕ್ಕೆ ನೆಹರೂ ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಎಸ್‌ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ವಿಠಲ ಶೆಟ್ಟಿ ಫೌಂಡೇಶನ್ ಸ್ಥಾಪಕ ರಾಕೇಶ್ ಅಣ್ಣ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಾಜಿ ಶಾಸಕ ಮೊಯ್ದಿನ್ ಬಾವ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ತುಳು ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಮಾಜಿ ಅಧ್ಯಕ್ಷರಾದ ಪಮ್ಮಿ ಕೋಡಿಯಾಲ್ ಬೈಲ್ ಮತ್ತು ಮೋಹನ್ ಕೊಪ್ಪಳ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬೆದ್ರ, ಅನಿಲ್ ಕರ್ಕೇರ ಖಜಾಂಜಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!