ಜ್ಞಾನದ ಕೇಂದ್ರ ಪಸರಿಸುತ್ತಿದೆ ಇತಿಹಾಸದ ಹೊಂಗಿರಣ ….. !

ಮಂಗಳೂರು : ಮಂಗಳೂರು ಸಮೀಪದ ಮುಡಿಪು ಗುಡ್ಡದ ಮೇಲಿರುವ ಶ್ರೀಕೃಷ್ಣ ಧ್ಯಾನ ಕೇಂದ್ರವು ಇಂದು ಧ್ಯಾನ, ಆಧ್ಯಾತ್ಮಿಕತೆ ಮತ್ತು ಇತಿಹಾಸವನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವ ವಿಶಿಷ್ಟ ತಾಣವಾಗಿ ಗುರುತಿಸಿಕೊಂಡಿದೆ. ಪ್ರಕೃತಿಯ ಸೊಬಗು ಮಧ್ಯೆ ನಿರ್ಮಾಣವಾಗಿರುವ ಈ ಭವ್ಯ ಧ್ಯಾನ ಮಂದಿರವು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಸಸ್ಯ ಸಿರಿರಾಶಿ ಪ್ರಕೃತಿಯ ನಡುವೆ ಎತ್ತರದ ಗುಡ್ಡದ ಮೇಲೆ ಭವ್ಯವಾಗಿ ವಿರಾಜಮಾನವಾಗಿರುವ ಶ್ರೀಕೃಷ್ಣ ಧ್ಯಾನ ಮಂದಿರವು ತನ್ನ ವಿಶಿಷ್ಟ ವಾಸ್ತುಶೈಲಿಯಿಂದಲೇ ಗಮನ ಸೆಳೆಯುತ್ತದೆ. ಪುರಿ ಜಗನ್ನಾಥ ಮಂದಿರವನ್ನು ಹೋಲುವ ಈ ಧ್ಯಾನ ಕೇಂದ್ರವು ಮಂಗಳೂರು ತಾಲ್ಲೂಕಿನ ಮುಡಿಪು ಗ್ರಾಮದಲ್ಲಿದೆ.

ಮಂಗಳೂರಿನ ಸಮೀಪದಲ್ಲಿರುವ ಈ ಧ್ಯಾನ ಕೇಂದ್ರವು ಇಂದು ಇತಿಹಾಸದ ಹೊಂಗಿರಣವನ್ನು ಎಲ್ಲೆಡೆ ಪಸರಿಸುತ್ತಿದ್ದು, ಧ್ಯಾನಕ್ಕೂ ಆಧ್ಯಾತ್ಮಿಕ ಚಿಂತನೆಗೂ ಪ್ರಮುಖ ತಾಣವಾಗಿ ರೂಪುಗೊಂಡಿದೆ. ಪ್ರಕೃತಿಯ ರಮ್ಯ ವಾತಾವರಣದ ನಡುವೆ ನಿರ್ಮಾಣಗೊಂಡಿರುವ ಈ ಮಂದಿರವು ಭಕ್ತರಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ.

ಸುಮಾರು 80 ವರ್ಷಗಳ ಹಿಂದೆ ಬಾಲ್ಯದಲ್ಲೇ ಈ ಗುಡ್ಡದ ಮೇಲೆ ಧ್ಯಾನ ಕೇಂದ್ರ ನಿರ್ಮಿಸಬೇಕು ಎಂಬ ಕನಸನ್ನು ಕಂಡ ಖ್ಯಾತ ವೈದ್ಯರಾದ ಡಾ. ಮದನ್ ಮೋಹನ್ ನಾಯಕ್, ತಮ್ಮ ಆ ಕನಸನ್ನು ಸಾಕಾರಗೊಳಿಸಿದ್ದಾರೆ. ಹಲವು ದಶಕಗಳ ನಂತರ ಅವರ ಪರಿಶ್ರಮದ ಫಲವಾಗಿ ಇಂದು ಸುಮಾರು 180 ಅಡಿ ಎತ್ತರದ ಭವ್ಯ ಧ್ಯಾನ ಕೇಂದ್ರ ಇಲ್ಲಿ ನಿರ್ಮಾಣಗೊಂಡಿದೆ.

ಮಂಗಳೂರು ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಈ ಧ್ಯಾನ ಕೇಂದ್ರವು ಸಾಗರ ಮಟ್ಟದಿಂದ ಸುಮಾರು 650 ಅಡಿ ಎತ್ತರದಲ್ಲಿದೆ. ಇಲ್ಲಿಂದ ಪಶ್ಚಿಮಘಟ್ಟ ಪರ್ವತಗಳ ಸುಂದರ ದೃಶ್ಯಗಳ ಜೊತೆಗೆ ಅರಬ್ಬಿ ಸಮುದ್ರದ ನೋಟವೂ ಕಾಣಸಿಗುತ್ತದೆ. ಈ ಪ್ರಾಕೃತಿಕ ಸೊಬಗು ಧ್ಯಾನಕ್ಕೆ ಬರುವವರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ.

2021ರಲ್ಲಿ ಅಧಿಕೃತವಾಗಿ ಆರಂಭವಾದ ಈ ಧ್ಯಾನ ಕೇಂದ್ರದ ವಾಸ್ತುಶಿಲ್ಪವು ಒಡಿಶಾದ ಭುವನೇಶ್ವರದಲ್ಲಿರುವ ಪ್ರಸಿದ್ಧ ಲಿಂಗರಾಜ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಧ್ಯಾನ ಮಂದಿರದ ಒಳಭಾಗದಲ್ಲಿ ಶ್ರೀಕೃಷ್ಣನ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಇದರ ಜೊತೆಗೆ ಸುಮಾರು 150 ಕಿಲೋ ತೂಕದ ದೀಪವನ್ನೂ ಇಲ್ಲಿ ಸ್ಥಾಪಿಸಲಾಗಿದೆ. ವಿವಿಧ ಧರ್ಮಗಳ ಆಧ್ಯಾತ್ಮಿಕ ನಾಯಕರ ಪ್ರತಿಮೆಗಳನ್ನೂ ಇಲ್ಲಿ ಪ್ರತಿಷ್ಠಾಪಿಸಿದ್ದು, ಎಲ್ಲ ಧರ್ಮಗಳ ಸಮಾನತೆಯ ಸಂದೇಶವನ್ನು ಈ ಕೇಂದ್ರ ನೀಡುತ್ತದೆ.

ಧ್ಯಾನ ಕೇಂದ್ರದ ಪಕ್ಕದಲ್ಲೇ ತುಳುನಾಡಿನ ಸಮೃದ್ಧ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ವಿಶೇಷ ಮ್ಯೂಸಿಯಂ ಕೂಡ ನಿರ್ಮಿಸಲಾಗಿದೆ. ಈ ಮ್ಯೂಸಿಯಂನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು, ಯಕ್ಷಗಾನ ಮತ್ತು ಕಂಬಳ ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳು, ಪುರಾತನ ನಾಣ್ಯಗಳು ಸೇರಿದಂತೆ ಅನೇಕ ಅಪರೂಪದ ಐತಿಹಾಸಿಕ ಸಂಗ್ರಹಗಳನ್ನು ಪ್ರದರ್ಶಿಸಲಾಗಿದೆ.

ಈ ಧ್ಯಾನ ಕೇಂದ್ರ ಮತ್ತು ಮ್ಯೂಸಿಯಂಗೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕೂಡ ಭೇಟಿ ನೀಡಿ ಇಲ್ಲಿ ಸಂಗ್ರಹಿಸಲಾದ ಅಪರೂಪದ ವಸ್ತುಗಳನ್ನು ಪ್ರಶಂಸಿಸಿದ್ದಾರೆ.

ಧ್ಯಾನ, ಸಂಸ್ಕೃತಿ ಮತ್ತು ಇತಿಹಾಸವನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವ ಈ ಶ್ರೀಕೃಷ್ಣ ಧ್ಯಾನ ಕೇಂದ್ರವು ಕರಾವಳಿಯ ಪ್ರಮುಖ ಆಕರ್ಷಣೀಯ ತಾಣವಾಗಿ ರೂಪುಗೊಂಡಿದೆ. ಭಕ್ತರು, ಪ್ರವಾಸಿಗರು ಹಾಗೂ ಇತಿಹಾಸಾಸಕ್ತರಿಗೆ ಇದು ವಿಶಿಷ್ಟ ಅನುಭವ ನೀಡುವ ಸ್ಥಳವಾಗಿದೆ.

ಬೈಟ್:
ಡಾ. ಮದನ್ ಮೋಹನ್ ನಾಯಕ್ – ಸ್ಥಾಪಕರು / ವೈದ್ಯರು

SHARE
Loading spinner

Leave a Reply

Your email address will not be published. Required fields are marked *

error: Content is protected !!