ಭಟ್ಟರ ಬಡಾನಿಡಿಯೂರು ರೆಸಾರ್ಟ್ ನ ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿದ ನಗರಾಭಿವೃದ್ಧಿ ಪ್ರಾಧಿಕಾರ
ಉಡುಪಿ: ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ವಿಳಂಬ ಖಂಡಿಸಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅನಿರ್ದಿಷ್ಟಾವಧಿ ಧರಣಿ ಆರಂಭ ಮಾಡಿದ ಎರಡನೇ ದಿನಕ್ಕೆ ಯಶಸ್ಸು ಸಿಕ್ಕಿದೆ.
ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಆದೇಶ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಘುಪತಿ ಭಟ್ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾಧಿಕಾರದ ಕಚೇರಿ ಮುಂದೆ ಆರಂಭಿಸಿದ್ದರು.
ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ನಕ್ಷೆ ನೀಡುವಂತೆ ರಘುಪತಿ ಭಟ್ 2024ರ ಮಾ.20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಈವರೆಗೆ ಅನುಮೋದನೆ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಬೆಳಿಗ್ಗೆ 9:30ರಿಂದ ಧರಣಿ ಆರಂಭಿಸಿದ್ದರು.ಇಂದು ಅವರ ಧರಣಿ ಎರಡನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ನಗರಾಭಿವೃದ್ಧಿ ಪ್ರಾಧಿಕಾರ ಏಕವಿನ್ಯಾಸ ನಕ್ಷೆ ಮಂಜೂರು ಮಾಡಿದೆ.