ಉಡುಪಿ: ಆಜ್ರಿ ಗ್ರಾಪಂ ವ್ಯಾಪ್ತಿಯ ಬಾಂಡ್ಯದ ಚಕ್ರಾ ನದಿಯ ತಟದಲ್ಲಿರುವ ಪುರಾತನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ದಾರ ಸಲುವಾಗಿ ಇತ್ತೀಚೆಗೆ ಆರೂಢ ಚಿಂತನಾ ಪ್ರಶ್ನೆ ಇಡಲಾಗಿತ್ತು. ಈ ವೇಳೆ ಅಲ್ಲಿಯೇ ಸಮೀಪದಲ್ಲಿ ಹರಿಯುವ ಚಕ್ರಾ ನದಿಯಲ್ಲಿ ಆಂಜನೇಯನ ಕೆತ್ತನೆಯಿರುವ ಬಂಡೆಯೊಂದು ಪತ್ತೆಯಾಗಿದ್ದು, ಅದರ ಹಿಂದೆ ಹತ್ತಾರು ಕಥೆಗಳಿರುವುದು ಬೆಳಕಿಗೆ ಬಂದಿದೆ.
ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದು ನೂರಾರು ವರ್ಷಗಳ ಕಾಲ ಪೂಜೆ ನಡೆಯುತ್ತಿತ್ತು. ಈ ನಡುವೆ, ಕೆಲವು ವರ್ಷದ ಬಳಿಕ ದೇವಸ್ಥಾನ ಅಜೀರ್ಣಾವಸ್ಥೆ ತಲುಪಿತು. ನಂಬಿದ ಕುಟುಂಬದವರು ಬೇರೆಡೆ ವಲಸೆ ಹೋಗಿದ್ದರು. ಅದಾಗಿ ಕೆಲವು ವರ್ಷಗಳಿಂದ ಮತ್ತೆ ಪೂಜೆಗಳು ನಡೆಯುತ್ತಿವೆ.
ಈಗ ಮತ್ತೆ ದೇವಸ್ಥಾನದ ಜೀರ್ಣೋದ್ದಾರಕ್ಕೆ ಊರವರು ಮುಂದಾಗಿದ್ದು, ಊರಿನ ಪ್ರಮುಖರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಹಾಲಾಡಿಯ ಜ್ಯೋತಿಷಿ, ಪಂಚಾಂಗಕರ್ತರು ತಟ್ಟುವಟ್ಟು ವಾಸುದೇವ ಜೋಯಿಸರಿಂದ ಆರೂಢ ಪ್ರಶ್ನೆ ನಡೆಸುವುದಾಗಿ ತೀರ್ಮಾನಿಸಲಾಯಿತು. ಆರೂಢ ಪ್ರಶ್ನೆ ವೇಳೆ ಕೆಲವೊಂದು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದವು. ಶ್ರೀ ವೆಂಕಟರಮಣ ದೇವಸ್ಥಾನದ ಜತೆಗೆ ಇದೇ ದೇಗುಲದ ಪಕ್ಕದಲ್ಲೇ ಸನ್ಯಾಸಿಯೊಬ್ಬರ ಸಮಾಧಿಯಿದೆ. ಅವರೇ ಈ ದೇವರಿಗೆ ಪೂಜೆ ಮಾಡುತ್ತಿದ್ದರು, ಮಾತ್ರವಲ್ಲದೆ, ಆ ಸನ್ಯಾಸಿಯ ಸಮಾಧಿ ಎದುರೇ ಚಕ್ರಾ ನದಿಯಲ್ಲಿಯೇ ಆಂಜನೇಯನ ಕೆತ್ತನೆಯಿರುವ ಬಂಡೆಯೊಂದು ಇರುವ ಬಗ್ಗೆಯೂ ಪ್ರಶ್ನೆಯಲ್ಲಿ ಗೋಚರವಾಗಿದೆ. ಊರವರೆಲ್ಲರ ಹುಡುಕಾಟ ನಡೆಸಿದಾಗ ಆ ಬಂಡೆ ಪತ್ತೆಯಾಗಿದೆ. ಅದಕ್ಕೂ ಈ ಸನ್ಯಾಸಿಯೇ ಪೂಜೆ ಮಾಡುತ್ತಿದ್ದರು ಅನ್ನುವ ವಿಚಾರ ಬೆಳಕಿಗೆ ಬಂದಿದೆ.
ಬಾಂಡ್ಯದ ಈ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವು ಈಗ ಅರ್ಜೀಣ್ರವಸ್ಥೆಯಲ್ಲಿದ್ದರೂ, ಪ್ರಕೃತಿ ಸಹಜ ಸೊಬಗಿನ ನಡುವೆ ಇದ್ದು, ದಟ್ಟ ಕಾನನದ ನಡುವೆ ವಿಶೇಷ ಅನುಭೂತಿಯನ್ನು ನೀಡುವ ಧಾರ್ಮಿಕ, ಶ್ರದ್ದಾ ಕೇಂದ್ರದಂತಿದೆ. ಪ್ರತಿ ದಿನ ಈ ದೇವಸ್ಥಾನದ ಬಾಗಿಲು ತೆರೆದ ಕೂಡಲೇ, 1 ದನ ಹಾಗೂ 1 ಕರು ದೇವರ ಮುಂದೆ ಬರುತ್ತವೆ. ಒಂದು ಹಸು ಶಾಂತವಾಗಿ ದೇವರನ್ನು ನೋಡುತ್ತಾ ನಿಂತರೆ, ಮತ್ತೊಂದು ಹಸು ದೇವಸ್ಥಾನಕ್ಕೆ ಅಪ್ರದಕ್ಷಿಣೆ ಹಾಕುತ್ತದೆಯಂತೆ. ಕೆಲವೊಮ್ಮೆ ಆ ಹಸು ಮೂರೂ ಬಾರಿ ಕೂಡ ಅಪ್ರದಕ್ಷಿಣೆ ಹಾಕುತ್ತಿದೆಯಂತೆ. ಅಪ್ರದಕ್ಷಿಣೆ ಮುಗಿದ ಅನಂತರ, ಹಸುಗಳು ದೇವರ ಮುಂದೆ ನಿಂತೇ ಇರುತ್ತವೆ. ಅರ್ಚಕರು ಪ್ರಸಾದ ಕೊಟ್ಟ ಅನಂತರವೇ ಅಲ್ಲಿಂದ ತೆರಳುತ್ತವೆ. ಇದು ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನುವುದಾಗಿ ಸ್ಥಳೀಯರಾದ ಮಂಜುನಾಥ ಕೆಳಬಾಂಡ್ಯ ಹೇಳುತ್ತಾರೆ.
ಪ್ರಾಚೀನ ವೆಂಕಟರಮಣ ಮಠ ಆರಂಭದ ಆಗಿದ್ದು ಒಬ್ಬ ಸನ್ಯಾಸಿಯಿಂದ. ಬಂಡೆ ಮೇಲೆ ಕೂತು ಸನ್ಯಾಸಿ ಮಾಡಿದ ತಪಸ್ಸಿನ ಫಲವಾಗಿ ಮೂಡಿ ಬಂದಿದ್ದು ಆಂಜನೇಯನ ಮೂರ್ತಿ. ಪ್ರಶ್ನೆ ಇಟ್ಟಾಗ ಸಮಾಧಿ, ಆಂಜನೇಯನ ಮೂರ್ತಿ ಇರುವುದು ಬೆಳಕಿಗೆ ಬಂತು. ಕುಟೀರವೊಂದರ ಅಡಿಪಾಯ ಕೂಡ ಪತ್ತೆಯಾಗಿದೆ. ಬಂಡೆ ಆಂಜನೇಯನಿಂದ ಬಾಂಡ್ಯ ಆಗಿರಬಹುದೇ ಅನ್ನುವ ಪ್ರಶ್ನೆಯೂ ಇದೆ ಎನ್ನುತ್ತಾರೆ ತಟ್ಟುವಟ್ಟು ವಾಸುದೇವ ಜೋಯಿಸರು.
ಈ ದೇವಸ್ಥಾನ ಜಿಎಸ್ಟಿ ಸಮಾಜಕ್ಕೆ ಸೇರಿದ್ದು, ಆಂಜನೇಯ ಬಂಡೆ ಇರುವ, ಸನ್ಯಾಸಿ ಸಮಾಧಿ ಮಾಹಿತಿ ಸಿಕ್ಕಿತು. ಅದರಂತೆ ಹುಡುಕಿದಾಗ ಆಂಜನೇಯ ಬಂಡೆ ಹಾಗೂ ಸನ್ಯಾಸಿ ಸಮಾಧಿ ಚಕ್ರಾ ನದಿ ದಂಡೆಯಲ್ಲಿ ಪತ್ತೆಯಾಗಿದೆ. ಹಾಗೆ ದೇವಸ್ಥಾನದ ಮೂಲದವರು ಅಭಿವೃದ್ಧಿಗೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ. ದೇವರ ಇಚ್ಛೆಯಂತೆ ಊರವರೆಲ್ಲರ ಸಹಕಾರದಿಂದ ಅಭಿವೃದ್ಧಿಪಡಿಸುವ ಚಿಂತನೆಯಿದೆ ಎಂದು ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ತಿಳಿಸಿದ್ದಾರೆ.