ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ವಿವಿಧ ಯೋಜನೆಗಳು: ಜಾಗೃತಿ ಅಭಿಯಾನ – ಪಿ.ಎಂ. ಮಾಲತೇಶ್

ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿರುವುದು ಸಂತಸದ ವಿಷಯವಾಗಿದ್ದು, ಈ ಯೋಜನೆಗಳ ಕುರಿತು ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪಿ.ಎಂ. ಮಾಲತೇಶ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಹಾಗೂ ನಿಗಮದ ವಿವಿಧ ಯೋಜನೆಗಳ ಮಾಹಿತಿ ಕೈಪಿಡಿ ಮೂಲಕ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯ ‘ಅಸಂಘಟಿತ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆಯಡಿ ಅರ್ಚಕರು, ಪುರೋಹಿತರು ಸೇರಿದಂತೆ 91 ವೃತ್ತಿಗಳನ್ನು ಅಸಂಘಟಿತ ವರ್ಗಕ್ಕೆ ಸೇರಿಸಲಾಗಿದ್ದು, ಇದರಿಂದ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.

ಇದೇ ವೇಳೆ ಧಾರ್ಮಿಕ ದತ್ತಿ ಇಲಾಖೆಯಿಂದ ಅರ್ಚಕರ ಮಕ್ಕಳಿಗೆ ವಿದ್ಯಾಭ್ಯಾಸ ಪ್ರೋತ್ಸಾಹಧನ ಹಾಗೂ ಕೈಲಾಸ ಮಾನಸ ಸರೋವರ, ಚಾರ್ಧಾಮ್ ಮತ್ತು ಕಾಶಿ ಯಾತ್ರೆಗೆ ಕ್ರಮವಾಗಿ ರೂ.30 ಸಾವಿರ, ರೂ.20 ಸಾವಿರ ಮತ್ತು ರೂ.5 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಿಗಮದ ವತಿಯಿಂದ “ವಿಪ್ರ ಸ್ವಉದ್ಯಮ ನೇರ ಸಾಲ”, “ಸಾಂದೀಪಿನಿ ಶಿಷ್ಯ ವೇತನ” ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿದ್ದು, ಸಾವಿರಾರು ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 2026-27ನೇ ಸಾಲಿನಲ್ಲೂ ಈ ಯೋಜನೆಗಳು ಮುಂದುವರೆಯಲಿದ್ದು, ಅರ್ಹರು ಇ.ಡಬ್ಲ್ಯೂ.ಎಸ್ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿಗಮದ ಸದಸ್ಯರಾದ ಶ್ರೀಧರ್ ಹೊಳ್ಳ, ನಮಿತಾ ಡಿ. ರಾವ್, ರಾಘವೇಂದ್ರ ರಾವ್, ಎಂ. ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!