ನಾಲ್ಕು ದಿನಗಳ ಬಳಿಕ ಕಾಡಿನೊಳಗೆ ಕಾಣೆಯಾಗಿದ್ದ ಯುವತಿ ಸುರಕ್ಷಿತವಾಗಿ ಪತ್ತೆ: ರೋಚಕ ರಕ್ಷಣಾ ಕಾರ್ಯಾಚರಣೆ

ವಿರಾಜಪೇಟೆ: ಕೇರಳದ ಶರಣ್ಯ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ , ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಶಾಸಕ ಎ . ಎಸ್ . ಪೊನ್ನಣ್ಣ ಅವರ ಮಾರ್ಗದರ್ಶನದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಸ್ಥಳೀಯರ ಸಹಕಾರ ಮತ್ತು ಅತ್ಯಾಧುನಿಕ ಉಪಕರಣಗಳ ನೆರವಿನಿಂದ ನಡೆದ ಶೋಧ ಕಾರ್ಯಾಚರಣೆಯ ನಡುವೆ, ಕುಡಿಯ ಜನಾಂಗದವರು ತಮ್ಮ ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಅಂತಿಮವಾಗಿ ಭಾನುವಾರ ನಾಲ್ಕು ದಿನಗಳ ಬಳಿಕ ಶರಣ್ಯ ಜೀವಂತವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಕುಡಿಯ ಜನಾಂಗದ ಅಯ್ಯಪ್ಪ, ಸುಬ್ರಹ್ಮಣಿ, ಮಣಿಕಂಠ, ರಾಜು ಮತ್ತು ಮಣಿ ಎಂಬ ಯುವಕರ ತಂಡ ತಡಿಯಂಡಮೋಳ್ ಬೆಟ್ಟದ ಪಾಂಡನಮಲೆ ಪ್ರದೇಶದಲ್ಲಿ ಶರಣ್ಯಳನ್ನು ಪತ್ತೆಹಚ್ಚಿತು.

ತಂಡದ ಸದಸ್ಯ ಅಯ್ಯಪ್ಪ ವಿವರಿಸಿದಂತೆ, “ಕಾಡಿನ ಮುಖ್ಯ ದಾರಿಯನ್ನು ಬಿಟ್ಟು ಬೆಟ್ಟದ ತಪ್ಪಲಿನ ಬಂಡೆಗಳ ಬಳಿ ಹುಡುಕಾಟ ನಡೆಸಲು ನಿರ್ಧರಿಸಿದ್ದೇವೆ. ನದಿ ತೀರದಲ್ಲಿ ‘ಶರಣ್ಯ’ ಎಂದು ಕೂಗುತ್ತಿದ್ದಾಗ ನಾಲ್ಕನೇ ಬಾರಿ ಕೂಗಿದಾಗ ದೂರದಿಂದ ಧ್ವನಿ ಕೇಳಿಬಂದಿತು. ಅದನ್ನು ಅನುಸರಿಸಿ 3-4 ಕಿ.ಮೀ ದೂರ ಸಾಗಿದಾಗ ಆಕೆಯನ್ನು ಪತ್ತೆಹಚ್ಚಲಾಯಿತು,” ಎಂದರು.

ಪಾಂಡನಮಲೆ ಪ್ರದೇಶದ ಎರಡು ಸಣ್ಣ ನದಿಗಳ ನಡುವೆ ಇರುವ ಬಂಡೆಯ ಮೇಲೆ ಶರಣ್ಯ ನಿಂತಿರುವುದು ಕಂಡುಬಂದಿತು. ರಕ್ಷಣಾ ತಂಡವನ್ನು ಕಂಡ ಕೂಡಲೇ ಆಕೆ ಭಾವುಕರಾಗಿ ಅತ್ತಳು. ಬಳಿಕ ತಂಡದವರು ಆಕೆಯನ್ನು ಸುರಕ್ಷಿತವಾಗಿ ಬೇಸ್ ಕ್ಯಾಂಪ್‌ಗೆ ಕರೆತಂದರು.

ಶರಣ್ಯ ದಾರಿ ತಪ್ಪಿ ಬಂಡೆಯ ಬಳಿ ಆಶ್ರಯ ಪಡೆದಿದ್ದು, ಹರಿಯುವ ನೀರಿನಿಂದಲೇ ನಾಲ್ಕು ದಿನಗಳ ಕಾಲ ಬದುಕುಳಿದಿದ್ದಾಳೆ. ಆಹಾರವಾಗಿ ಇದ್ದ ಬಿಸ್ಕೆಟ್ ಮೊದಲ ದಿನವೇ ಮುಗಿದಿತ್ತು ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆಯ ಯಶಸ್ಸಿಗೆ ಕಾಡಿನ ಪರಿಚಯ ಮತ್ತು ತಂಡದ ಧೈರ್ಯ ಕಾರಣವಾಗಿದೆ. “ಕಾಡೇ ನಮ್ಮ ದೇವರು, ನಾವು ನಂಬಿದ ದೈವ ಮೋಸ ಮಾಡುವುದಿಲ್ಲ,” ಎಂದು ಅಯ್ಯಪ್ಪ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!