ಗ್ಯಾಸ್ ಸಿಲಿಂಡರ್ ವಿಚಾರದಿಂದ ಬಯಲಾಯ್ತು ಜೀವಮರಣ ಹೋರಾಟ: ಬದುಕುಳಿದ ಶ್ರೀನಿವಾಸ ಆಚಾರ್ಯ

ಉಡುಪಿ : ಕಂಬಳಕಟ್ಟೆಯ ನಿವಾಸಿ 62 ವರ್ಷದ ಶ್ರೀನಿವಾಸ ಆಚಾರ್ಯ ಅವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಮರಣ ಹೋರಾಟ ನಡೆಸಿ ಪವಾಡಸದೃಶವಾಗಿ ಬದುಕುಳಿದ ಘಟನೆ ನಡೆದಿದೆ.
ಶನಿವಾರ ಸಂಜೆ ತಮ್ಮ ಮನೆಯ ಮುಂದಿರುವ ಸುಮಾರು 20 ಅಡಿ ಆಳದ ಬಾವಿಯಿಂದ ಪಂಪ್ ಪೈಪ್‌ಗೆ ಕಟ್ಟಿದ್ದ ಹಗ್ಗವನ್ನು ಎಳೆಯುವ ವೇಳೆ ಹಗ್ಗ ತುಂಡಾಗಿ ಅವರು ಬಾವಿಗೆ ಬಿದ್ದಿದ್ದಾರೆ. ನೀರಿನಲ್ಲಿ ಮುಳುಗಿದರೂ, ಅಲ್ಲಿ ಇದ್ದ ಫುಟ್‌ಬಾಲ್ ಪೈಪ್ ಹಗ್ಗವನ್ನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅವರ ಕೂಗು ಯಾರಿಗೂ ಕೇಳಿಸದ ಕಾರಣ ಅವರು ಮೂರು ದಿನಗಳ ಕಾಲ ಬಾವಿಯೊಳಗೆ ಸಿಲುಕಿಕೊಂಡಿದ್ದರು.

ಶ್ರೀನಿವಾಸ್ ಅವರು ಗ್ಯಾಸ್ ಬುಕ್ ಮಾಡಿದ್ದರೂ ತಡವಾದ ಕಾರಣ ಪರಿಚಯಸ್ಥರಾದ ಗಣೇಶ್ ಅವರಿಂದ ಗ್ಯಾಸ್ ಸಿಲಿಂಡರ್ ಪಡೆದಿದ್ದರು. ಬಳಿಕ ಗಣೇಶ್ ಅವರಿಗೆ ಅಗತ್ಯ ಬಿದ್ದಾಗ ಕರೆ ಮಾಡಿದಾಗ, ತನ್ನ ಬುಕ್ ಮಾಡಿದ್ದ ಸಿಲಿಂಡರ್ ಬಂದ ನಂತರ ನೀಡುವುದಾಗಿ ಶ್ರೀನಿವಾಸ್ ತಿಳಿಸಿದ್ದಾರೆ. ಮೂರ್ನಾಲ್ಕು ದಿನಗಳ ಬಳಿಕವೂ ಸಂಪರ್ಕವಾಗದ ಹಿನ್ನೆಲೆಯಲ್ಲಿ ಗಣೇಶ್ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿದಾಗ,ಶ್ರೀನಿವಾಸ್ ಅವರು ಎರಡು ದಿನಗಳಿಂದ ಮನೆಯಲ್ಲೇ ಇಲ್ಲವೆಂದು ತಿಳಿದುಬಂದಿದೆ.


ಇದರಿಂದ ಅನುಮಾನಗೊಂಡ ಗಣೇಶ್ ಅವರು, ಶ್ರೀನಿವಾಸ್ ಅವರ ಮನೆಯ ಬಳಿ ಇರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವರಿಗೆ ಕರೆ ಮಾಡಿ ಪರಿಶೀಲಿಸಲು ತಿಳಿಸಿದ್ದಾರೆ. ಅವರು ಮನೆಯ ಸುತ್ತಮುತ್ತ ಹುಡುಕಿದ ನಂತರ ಬಾವಿಯಲ್ಲಿ ನೋಡಿದಾಗ, ಶ್ರೀನಿವಾಸ ಆಚಾರ್ಯರು ಮೂರು ದಿನಗಳಿಂದ ಹಗ್ಗ ಮತ್ತು ಫುಟ್‌ಬಾಲ್ ಪೈಪ್ ಹಿಡಿದು ನಿತ್ರಾಣಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ತಕ್ಷಣ ಸ್ಥಳೀಯರು ಬಾವಿಗೆ ಏಣಿ ಇಳಿಸಿ ಮೇಲಕ್ಕೆ ಬರಲು ಸೂಚಿಸಿದರೂ, ಆಹಾರವಿಲ್ಲದೆ ದುರ್ಬಲಗೊಂಡಿದ್ದರಿಂದ ಅವರಿಗೆ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳಾದ ಸತೀಶ್, ಅಶ್ವಿನ್ ಸನಿಲ್, ಚಾಲಕ ಭರತ್ ಎನ್., ಹಾಗೂ ಫೈರ್‌ಫೈಟರ್‌ಗಳಾದ ಗಣೇಶ್ ವೇತಾಳ್ ಮತ್ತು ಮಹಾಂತೇಶ್ ಅವರು ಸ್ಥಳೀಯರ ಸಹಕಾರದೊಂದಿಗೆ ಬಾವಿಯೊಳಗೆ ಇಳಿದು ಆಚಾರ್ಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು.
ಪ್ರಸ್ತುತ ಅವರು ಚೇತರಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಗಳ ಸಾಹಸ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!