ಬಂಟ್ವಾಳ: ಬಿಸಿರೋಡು–ಕಡೂರು ರಾಷ್ಟ್ರೀಯ ಹೆದ್ದಾರಿಯ ವಗ್ಗದಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ವಗ್ಗ ನಿವಾಸಿ ಜಗದೀಶ ಪೂಜಾರಿ ಮೃತ ವ್ಯಕ್ತಿಯಾಗಿದ್ದಾರೆ. ಇಡ್ಲಿ ವ್ಯಾಪಾರಿಯಾಗಿದ್ದ ಅವರು, ವಗ್ಗದ ರೆಸ್ಟೋರೆಂಟ್ ಒಂದರಿಂದ ವ್ಯಾಪಾರದ ಹಣವನ್ನು ಪಡೆದು ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿದೆ.
ಬಿಸಿರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ಸ್ಕೂಟರ್ ಸವಾರ ಮೊಹಮ್ಮದ್ ಯಾಸೀನ್ ಅವರು ಡಿಕ್ಕಿ ಹೊಡೆದ ಪರಿಣಾಮ ಜಗದೀಶ್ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಕೂಟರ್ ಸವಾರನ ದುಡುಕು ಮತ್ತು ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಠಾಣೆಯ ಎಸ್.ಐ. ಆದರ್ಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.