ಉಡುಪಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡನೆ ಮಸೂದೆ ವಿರೋಧಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆ ಮೂಲಕ ಬ್ರಹ್ಮಗಿರಿ ಸರ್ಕಲ್‌ಗೆ ಆಗಮಿಸಿದ ಕಾರ್ಯಕರ್ತರು ಅಲ್ಲಿಗೆ ತಲುಪಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಗುರಾಣಿಯಾಗಿ ಬಳಸಿಕೊಂಡು ಕ್ಷೇತ್ರ ಮರುವಿಂಗಡನೆ ಮಸೂದೆ ಮಂಡಿಸಲು ಯತ್ನಿಸಿದೆ ಎಂದು ಆರೋಪಿಸಿದರು. ಆದರೆ ವಿರೋಧ ಪಕ್ಷಗಳು ಆ ಮಸೂದೆಯನ್ನು ಸೋಲಿಸಿವೆ ಎಂದು ಹೇಳಿದರು.
2023ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದರೂ, ಅದನ್ನು ಕೇಂದ್ರ ಸರ್ಕಾರ ಇನ್ನೂ ಜಾರಿಗೆ ತರಲಿಲ್ಲ. ಈಗ ಅದನ್ನೇ ಮುಂದಿಟ್ಟು ಅವೈಜ್ಞಾನಿಕ ರೀತಿಯಲ್ಲಿ ಕ್ಷೇತ್ರ ಮರುವಿಂಗಡನೆ ಮಾಡಲು ಮುಂದಾಗಿದೆ ಎಂದು ಅವರು ಟೀಕಿಸಿದರು.
ಕೇಂದ್ರ ಸರ್ಕಾರ ಮಹಿಳಾಪರ ಎಂದು ಹೇಳಿಕೊಂಡರೂ, ದೇಶಕ್ಕೆ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದ ಹೆಗ್ಗಳಿಗೆ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಹೇಳಿದರು. ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ ಪಕ್ಷವೂ ಕಾಂಗ್ರೆಸ್ ಎಂದರು.
ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರ ಮರುವಿಂಗಡನೆ ಮಸೂದೆ ಹಿಂಭಾಗಿಲಿನಿಂದ ಮಂಡಿಸಲು ನಡೆಯುತ್ತಿರುವ ಪ್ರಯತ್ನವನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ವಿರೋಧಿಸುತ್ತವೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರಿಪ್ರಸಾದ್ ರೈ, ಹೆಬ್ರಿ ಮಂಜುನಾಥ್ ಪೂಜಾರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.