ಬಿಸಿರೋಡು–ಮೆಲ್ಕಾರ್ ಹೆದ್ದಾರಿಗೆ ಬೆಳಕಿನ ಸ್ಪರ್ಶ: ಮೇ ಮೊದಲ ವಾರದಿಂದ ಬೀದಿ ದೀಪಗಳು ಶಾಶ್ವತವಾಗಿ ಬೆಳಕು

ಬಂಟ್ವಾಳ: ಬಿಸಿರೋಡಿನಿಂದ ಮೆಲ್ಕಾರ್ ವರೆಗೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಲಾದ ನೂತನ ವಿದ್ಯುತ್ ದೀಪಗಳನ್ನು ಏಪ್ರಿಲ್ 16ರ ರಾತ್ರಿ ಪ್ರಾಯೋಗಿಕವಾಗಿ ಉರಿಸಿ ಪರೀಕ್ಷಿಸಲಾಗಿದ್ದು, ಮೇ ಮೊದಲ ವಾರದಿಂದ ಶಾಶ್ವತವಾಗಿ ಬೆಳಕು ನೀಡಲಿವೆ ಎಂದು ರಘನಾಥ ರೆಡ್ಡಿ ತಿಳಿಸಿದ್ದಾರೆ.

ಬಿಸಿರೋಡು–ಅಡ್ಡಹೊಳೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನೆಲ್ಯಾಡಿ ಹಾಗೂ ಪೆರ್ನೆ ಭಾಗಗಳಲ್ಲಿ ಮಾತ್ರ ಸ್ವಲ್ಪ ಕೆಲಸ ಬಾಕಿಯಿದೆ. ಬಿಸಿರೋಡು–ಪೆರಿಯಶಾಂತಿ ವರೆಗೆ ವಿದ್ಯುತ್ ಕಂಬಗಳ ಅಳವಡಿಕೆ ಮತ್ತು ಲೈಟ್ ಫಿಟಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.

ನೆಲ್ಯಾಡಿ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಸುಮಾರು 80% ದೀಪಗಳು ಅಳವಡಿಕೆಯಾಗಿದ್ದು, ಉಳಿದ 20% ಕೆಲಸ ಮೇ ಮೊದಲ ವಾರದೊಳಗೆ ಪೂರ್ಣಗೊಳ್ಳಲಿದೆ. ಮಳೆಗಾಲಕ್ಕೂ ಮುನ್ನ ಎಲ್ಲ ಬೀದಿ ದೀಪಗಳು ಕಾರ್ಯನಿರ್ವಹಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಐ. ಪೈಪ್‌ಗಳನ್ನು ವಿದ್ಯುತ್ ಕಂಬಗಳಾಗಿ ಬಳಸಲಾಗಿದ್ದು, ಕ್ರಾಂಪ್ಟನ್ ಕಂಪನಿಯ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಗುಣಮಟ್ಟದ ಪರಿಕರಗಳನ್ನು ಬಳಸಿರುವುದರಿಂದ ಮಳೆಗಾಲದಲ್ಲಿಯೂ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಹೆದ್ದಾರಿಯ ಮಧ್ಯ ಭಾಗದಲ್ಲಿ ಕಂಬಗಳನ್ನು ಅಳವಡಿಸಿ ದೀಪಗಳನ್ನು ಹೊಂದಿಸಲಾಗಿದ್ದು, ಫ್ಲೈಓವರ್ ಆರಂಭ ಮತ್ತು ಅಂತ್ಯದ ಭಾಗಗಳಲ್ಲಿ ಸರ್ವಿಸ್ ರಸ್ತೆ ಮತ್ತು ಫ್ಲೈಓವರ್ ಎರಡಕ್ಕೂ ಅನ್ವಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮೆಸ್ಕಾಂ ಸಂಪರ್ಕಕ್ಕಾಗಿ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಾಯೋಗಿಕ ಪರೀಕ್ಷೆಗಾಗಿ ಜನರೇಟರ್ ಬಳಸಿ ಬಿಸಿರೋಡು–ಮೆಲ್ಕಾರ್ ಭಾಗದಲ್ಲಿ ದೀಪಗಳನ್ನು ಉರಿಸಲಾಗಿದೆ. ಮುಂದಿನ ಹಂತದಲ್ಲಿ ಪೆರಿಯಶಾಂತಿ ವರೆಗೆ ಇದೇ ರೀತಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಪ್ರಾಯೋಗಿಕ ಪರೀಕ್ಷೆಗಳ ನಂತರ ಮೆಸ್ಕಾಂ ಮೂಲಕ ಶಾಶ್ವತ ವಿದ್ಯುತ್ ಸಂಪರ್ಕ ನೀಡಿ ದೀಪಗಳನ್ನು ನಿರಂತರವಾಗಿ ಉರಿಸಲಾಗುತ್ತದೆ. ಎಲ್ಲಾ ಕಾರ್ಯಗಳು ಯೋಜನೆಯಂತೆ ನಡೆದರೆ ಮಳೆಗಾಲಕ್ಕೂ ಮುನ್ನ ಬಿಸಿರೋಡು–ಅಡ್ಡಹೊಳೆ ಹೆದ್ದಾರಿ ಬೆಳಕಿನ ಹೊಳಪಿನಿಂದ ಮಿನುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!