ಉಚಿತ ಬಸ್ ಪ್ರಯಾಣ ಜಾರಿಗೆ ವಿಳಂಬ: ಮಹಿಳೆಯರಿಗೆ ವಂಚನೆ ಎಂದ ಬಿಜೆಪಿ.ಕಾಸರಗೋಡಿನಲ್ಲಿ ಪ್ರತಿಭಟನೆ, ಟಿಕೆಟ್ ರಹಿತ ಪ್ರಯಾಣ ಯತ್ನ

ಕಾಸರಗೋಡು: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಮೇ 15ರಿಂದ ಜಾರಿಗೆ ತರದಿರುವುದು ಮಹಿಳಾ ಸಮುದಾಯಕ್ಕೆ ಮಾಡಿದ ವಂಚನೆ ಎಂದು ಎಂ.ಎಲ್. ಅಶ್ವಿನಿ ಆರೋಪಿಸಿದರು.

ಭಾರತೀಯ ಜನತಾ ಪಾರ್ಟಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ‘ಟಿಕೆಟ್ ರಹಿತ ಪ್ರಯಾಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದೊಂದಿಗೆ ಚುನಾವಣೆ ನಡೆದ ಇತರೆ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆ ಮತ್ತು ಸಚಿವ ಸಂಪುಟ ಸಭೆಗಳು ಈಗಾಗಲೇ ನಡೆದಿವೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರ ಜೂನ್‌ನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದೆ. ಆದರೆ ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆಗಳು ಮಾತ್ರ ನಡೆಯುತ್ತಿವೆ ಎಂದು ಅವರು ಟೀಕಿಸಿದರು.

ವಿ.ಡಿ. ಸತೀಶನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸುವಲ್ಲಿ ಉಂಟಾಗಿರುವ ವಿಳಂಬಕ್ಕೆ ರಾಜ್ಯದ ಜನರು ಕಾರಣರಲ್ಲ. ಅಧಿಕಾರ ಹಂಚಿಕೆ ಗೊಂದಲದಿಂದ ಸಚಿವ ಸಂಪುಟ ರಚನೆಯೂ ತಡವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಭರವಸೆ ನೀಡಿದ್ದ ಇಂದಿರಾ ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ವಿಳಂಬ ಮಾಡಿದರೆ ಭಾರೀ ಜನಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಅಶ್ವಿನಿ ಎಚ್ಚರಿಸಿದರು.

ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಮೀಳ ಮಜಲ್, ಪುಷ್ಪ ಗೋಪಾಲನ್, ಮಹിളಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯಕ್ ಸೇರಿದಂತೆ ಹಲವು ಮಹಿಳಾ ಮುಖಂಡರು ಭಾಗವಹಿಸಿದ್ದರು.

ಅಶ್ವಿನಿ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆಗಳ ಮಹಿಳಾ ಜನಪ್ರತಿನಿಧಿಗಳು ಮಂಗಳೂರಿಗೆ ತೆರಳುವ ಬಸ್‌ಗೆ ಹತ್ತಿ ಉಚಿತ ಪ್ರಯಾಣಕ್ಕೆ ಪ್ರಯತ್ನಿಸಿದರು. ಆದರೆ ಅಧಿಕೃತ ಆದೇಶವಿಲ್ಲದೆ ಪ್ರಯಾಣಕ್ಕೆ ಅವಕಾಶ ನೀಡಲು ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ವಾಗ್ವಾದ ನಡೆಯಿತು.

ನಂತರ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!