ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗೇರು ಅಥವಾ ಗೋಡಂಬಿ ಬೆಳೆ ಅಭಿವೃದ್ಧಿಗೆ ಅಪಾರ ಅವಕಾಶವಿದ್ದು, ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲು ಗೇರು ಅಭಿವೃದ್ಧಿ ನಿಗಮಕ್ಕೆ ₹1 ಕೋಟಿ ಅನುದಾನ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ನಗರದ ಕದ್ರಿ ಉದ್ಯಾನವನದಲ್ಲಿ ರವಿವಾರ ಗೇರು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಲಾದ ಗೇರು ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಂಡೋಸಲ್ಫಾನ್ ಅನಾಹುತದ ಬಳಿಕ ಹಲವಾರು ರೈತರು ಗೇರು ಬೆಳೆಯಿಂದ ದೂರವಾಗಿದ್ದು, ಅವರಿಗೆ ಪುನಃ ಉತ್ತೇಜನ ನೀಡಿ ಗೇರು ಬೆಳೆಯ ಗತವೈಭವವನ್ನು ಮರಳಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಆಸಕ್ತ ರೈತರಿಗೆ ನಿಗಮದ ನರ್ಸರಿಗಳಲ್ಲೇ ಕಸಿ ಮಾಡಿದ ಗುಣಮಟ್ಟದ ಗೋಡಂಬಿ ಸಸಿಗಳನ್ನು ಬೆಳೆಸಿ ಪೂರೈಸಲು ಸೂಚನೆ ನೀಡಲಾಗಿದೆ. ₹1 ಕೋಟಿ ವೆಚ್ಚದಲ್ಲಿ ಸಸಿಗಳನ್ನು ಬೆಳೆಸಿ ಮುಂದಿನ ವರ್ಷದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಗೇರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿದರೆ ರೈತರಿಗೆ ಉತ್ತಮ ಆದಾಯ ದೊರೆಯಲಿದೆ. ಉತ್ಪಾದನಾ ವೆಚ್ಚ ಕಡಿಮೆಯಾಗಿ ಲಾಭ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಕಚ್ಚಾ ಗೇರು ಬೀಜಗಳನ್ನು ಆಮದು ಮಾಡಿಕೊಂಡು ಸಂಸ್ಕರಿಸುವ ಪರಿಸ್ಥಿತಿ ಇರುವುದರಿಂದ, ರೈತರಿಗೆ ಮಾಹಿತಿ ಹಾಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಿ ಕರ್ನಾಟಕವನ್ನು ಗೇರು ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಮಳೆಯ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಪ್ರಮುಖವಾಗಿದೆ. ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ ಹಾಗೂ ಬೆಳೆ ಹಾನಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೃಕ್ಷ ಸಂರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕು ಎಂದು ಸಚಿವರು ಕರೆ ನೀಡಿದರು.
ಮೇಳದ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ 15 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್, ಕರಾವಳಿ ಭಾಗದ ಪಾಳುಬಿದ್ದ ಭೂಮಿಯಲ್ಲಿ ಗೇರು ಬೆಳೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ರೈ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಹಾಗೂ ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಎಸಿಎಫ್ ವಿ. ಕರಿಕಾಲನ್, ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್., ವಿವಿಧ ನಿಗಮಗಳ ಅಧ್ಯಕ್ಷರಾದ ಎಂ.ಎ. ಗಫೂರ್, ಉಮ್ಮರ್ ಯು.ಎಚ್., ತಾರಾನಾಥ ಗಟ್ಟಿಜೋಕಿಂ, ಸ್ವಾನಿ ಅಲ್ವಾರೀಸ್, ಟಿ.ಎಂ. ಶಾಹಿದ್ ತೆಕ್ಕಿಲ್, ಸದಾಶಿವ ಉಳ್ಳಾಲ್, ಭರತ್ ಮುಂಡೋಡಿ, ಸದಾನಂದ ಮಾವಜಿ, ಶಾಲೆಟ್ ಪಿಂಟೊ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಮನಪಾ ಆಯುಕ್ತ ರವಿಚಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.