ಕಾಪು ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ಐತಿಹಾಸಿಕ ಪಿಲಿಕೋಲ ವೈಭವ

ಉಡುಪಿ: ಕಾಪುವಿನ ಬ್ರಹ್ಮಮುಗ್ಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದೈವಾರ್ಷಿಕವಾಗಿ ನಡೆಯುವ ಐತಿಹಾಸಿಕ ಪಿಲಿಕೋಲ ಶನಿವಾರ ಸಂಜೆ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು.

ಸಂಪ್ರದಾಯದಂತೆ ಹುಲಿ ವೇಷ ಧರಿಸುವ ದೈವ ನರ್ತಕನಿಗೆ ಪೂರ್ವ ವಿಧಿವಿಧಾನಗಳೊಂದಿಗೆ ಸ್ನಾನ ಮಾಡಿಸಿ, ತೆಂಗಿನ ಗರಿಯಿಂದ ನಿರ್ಮಿಸಿದ ವಿಶೇಷ ಪಂಜರದೊಳಗೆ ಬಣ್ಣಗಾರಿಕೆಗಾಗಿ ಕಳುಹಿಸಲಾಯಿತು. ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡ ಬಳಿಕ ಪಟೇಲರ ಅನುಮತಿ ಪಡೆದು, ಪಿಲಿಚಂಡಿ ಮನೆಯವರು ತೀರ್ಥ ಚಿಮುಕಿಸಿದ ನಂತರ ನರ್ತಕನು ಪಂಜರದಿಂದ ಹೊರಬಂದು ಪಿಲಿಕೋಲಕ್ಕೆ ಚಾಲನೆ ನೀಡಿದರು.

ಪಿಲಿ ದೈವವು ಬ್ರಹ್ಮರಗುಂಡಕ್ಕೆ ಮೂರು ಸುತ್ತು ಬಂದು, ಬಳಿಕ ಮಾರಿಯಮ್ಮ ಗುಡಿಯ ಬಳಿ ನೆಟ್ಟಿದ್ದ ಕಂಬವನ್ನೇರಿ ಅದಕ್ಕೆ ಕಟ್ಟಿದ್ದ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಗೆ ತೆರಳುವ ಸಂಪ್ರದಾಯ ನೆರವೇರಿತು. ಬಳಿಕ ವಿವಿಧೆಡೆ ತೆರಳಿ ಹಾಲು ಹಾಗೂ ಸೀಯಾಳ ಸ್ವೀಕರಿಸುವ ಆಚರಣೆ ನಡೆಯಿತು. ಈ ವೇಳೆ ಪಿಲಿ ವೇಷಧಾರಿ ಮುಟ್ಟಿದರೆ ಕಂಟಕ ಉಂಟಾಗುತ್ತದೆ ಎಂಬ ನಂಬಿಕೆಯಿಂದ ಜನರು ತಪ್ಪಿಸಿಕೊಳ್ಳಲು ಓಡಾಡಿದ ದೃಶ್ಯ ವಿಶೇಷ ಆಕರ್ಷಣೆಯಾಯಿತು.

ಕಾಪು ಹಳೆ ಮಾರಿಯಮ್ಮ ಗುಡಿಯಲ್ಲಿ ಕಳೆದ ಮಂಗಳವಾರ ದೇವಿಯ ಅಪ್ಪಣೆ ಪಡೆದ ದೈವ ನರ್ತಕನಿಗೆ ಕೋಲದ ಹಿಂದಿನ ದಿನ ದೈವಸ್ಥಾನದಲ್ಲಿ ವೀಳ್ಯ ನೀಡುವ ಸಂಪ್ರದಾಯವೂ ನಡೆಯಿತು. ದೈವಾರ್ಷಿಕ ಪಿಲಿಕೋಲಕ್ಕಾಗಿ ದೈವ ನರ್ತಕನ ಆಯ್ಕೆಯನ್ನು ಮಾರಿಯಮ್ಮ ದೇವಿ ದೇವಸ್ಥಾನದ ಸನ್ನಿಧಿಯಲ್ಲೇ ನಿರ್ಧರಿಸಲಾಗುತ್ತದೆ.

ಇದಕ್ಕೂ ಮುನ್ನ ದೈವಸ್ಥಾನದಲ್ಲಿ ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ, ಪಿದಾಯಿ ಪಿಲ್ಟಂಡಿ, ಬ್ರಹ್ಮರ ನೇಮ, ಮುಗೇರ್ಕಳ, ಶಕ್ತಿ ಸ್ವರೂಪಿಣಿ ತನ್ನಿಮಾನಿಗ, ಮದುಮಗ ಹಾಗೂ ಪರಿವಾರ ದೈವಗಳ ನೇಮ, ಉರಿ ಚೌಂಡಿ ದೈವ, ಕಡುಂಜಿ ಬಂಟ, ಗುಳಿಗ ದೈವದ ನೇಮ ಸೇರಿದಂತೆ ಬಂಕಿನಾಯಕ, ಪೊಲೀಸ್ ಮತ್ತು ಪಟೇಲ್, ಬಲಾಯಿಮಾರ, ತಿಗಮಾರ ಹಾಗೂ ಪುರುಷ ಕೋಲ ಸಹಿತ ವಿವಿಧ ಪರಿವಾರ ದೈವಗಳ ನೇಮೋತ್ಸವಗಳು ವಿಜೃಂಭಣೆಯಿಂದ ನಡೆದವು.

ಕರಾವಳಿ ಜಿಲ್ಲೆಗಳಷ್ಟೇ ಅಲ್ಲದೆ ಕಾಸರಗೋಡು, ಮುಂಬೈ, ಬೆಂಗಳೂರು, ಮಲೆನಾಡು ಭಾಗಗಳು ಹಾಗೂ ವಿದೇಶಗಳಿಂದ ಆಗಮಿಸಿದ ನೂರಾರು ಭಕ್ತರು ಪಿಲಿಕೋಲದ ವೈಭವವನ್ನು ಕಣ್ತುಂಬಿಕೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!