ಸಾಲೆತ್ತೂರಿನಲ್ಲಿ ಅಕ್ರಮ ಗೋಸಾಗಾಟ ಪತ್ತೆ: ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ, ಪ್ರಕರಣ ದಾಖಲು

ವಿಟ್ಲ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಎರಡು ಜಾನುವಾರುಗಳನ್ನು ರಕ್ಷಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪಂಜರಕೋಡಿ ಎಂಬಲ್ಲಿ ನಡೆದಿದೆ. ಇದೇ ವೇಳೆ ಜಾನುವಾರು ಸಾಗಾಟ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಕಾರು ಚಾಲಕ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಯತ್ನಿಸಿದ ಘಟನೆ ಕೂಡ ನಡೆದಿದೆ.

ಈ ಸಂಬಂಧ ಬಂಟ್ವಾಳ ತಾಲೂಕು ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಪ್ ಹಾಗೂ ಸ್ವಿಫ್ಟ್ ಕಾರು ಚಾಲಕ ಬಶೀರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 21ರಂದು ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಠಾಣೆಯ ಎಸ್‌ಐ ರಾಮಕೃಷ್ಣ ಅವರಿಗೆ ಲಭಿಸಿತ್ತು. ಅದರಂತೆ ಸಿಬ್ಬಂದಿಗಳೊಂದಿಗೆ ಕೊಳ್ನಾಡು ಪಂಜರಕೋಡಿ ಪ್ರದೇಶದಲ್ಲಿ ನಾಕಾಬಂದಿ ನಡೆಸಿದ ವೇಳೆ ಅನುಮಾನಾಸ್ಪದವಾಗಿ ಬಂದ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಎರಡು ಜಾನುವಾರುಗಳು ಪತ್ತೆಯಾಗಿದ್ದವು.

ಈ ವೇಳೆ ಪಿಕಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಸ್ವಿಫ್ಟ್ ಕಾರಿನ ಚಾಲಕ ಬಶೀರ್, ಸ್ಥಳದಲ್ಲಿ ಪಿಕಪ್ ಚಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದ ಸಂದರ್ಭ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಪಿಕಪ್ ವಾಹನ ಚಾಲಕನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ವಧೆಗಾಗಿ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಪೊಲೀಸರು ಜಾನುವಾರುಗಳೊಂದಿಗೆ ಪಿಕಪ್ ವಾಹನವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!