ಪುತ್ತೂರು, ಜೂನ್ 5: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿರುವ ಸಮಯ ಸೂಕ್ತವಾಗಿದೆ ಎಂದು ತಮಗೆ ಅನಿಸುತ್ತಿಲ್ಲ. ಕಳೆದ ಮೂರು ವರ್ಷಗಳ ಆಡಳಿತದ ಹಾದಿಯನ್ನು ಮೀರಿ ಹೊಸ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಅವರು ಯಶಸ್ವಿಯಾಗಬಹುದು. ಪ್ರಸ್ತುತ ಅವರು ಮುಳ್ಳಿನ ಹಾಸಿಗೆಯಲ್ಲಿ ಮಲಗಿರುವಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.
ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಆಡಳಿತದಲ್ಲಿ ಭ್ರಷ್ಟಾಚಾರ, ಪಕ್ಷಪಾತ, ಅಭಿವೃದ್ಧಿ ಕುಂಠಿತ ಹಾಗೂ ಗುಂಪು ರಾಜಕೀಯ ಕಂಡಿದ್ದೇವೆ ಎಂದು ಆರೋಪಿಸಿದರು.
“ಈಗಾಗಲೇ ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿರುವ ಬೆಳವಣಿಗೆ ನೋಡಿದರೆ ಮುಖ್ಯಮಂತ್ರಿಯವರ ಸ್ಥಿತಿ ಮುಳ್ಳಿನ ಹಾಸಿಗೆಯಲ್ಲಿ ಮಲಗಿದಂತಿದೆ. ಇದು ಭೀಷ್ಮನ ಕೊನೆಯ ದಿನಗಳ ಪರಿಸ್ಥಿತಿಯನ್ನು ನೆನಪಿಸುತ್ತದೆ” ಎಂದು ಅವರು ವ್ಯಂಗ್ಯವಾಡಿದರು.
“ಒಬ್ಬ ಒಕ್ಕಲಿಗ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದು ಸಂತೋಷದ ಸಂಗತಿ. ಆದರೆ ಅವರ ಆಲೋಚನೆಗಳು ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದು ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಸುಲಭವಾಗುವುದಿಲ್ಲ” ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯ ಕುರಿತು ಪ್ರತಿಕ್ರಿಯಿಸಿದ ಸದಾನಂದ ಗೌಡ, “ನಾನು ಯಾವುದೇ ಚುನಾವಣಾ ಸ್ಪರ್ಧೆಯಲ್ಲಿಲ್ಲ. ನಾನು ಒಬ್ಬ ಸಂತೃಪ್ತ ರಾಜಕಾರಣಿ. ಆದರೆ ರಾಜ್ಯಸಭಾ ಸದಸ್ಯತ್ವದ ಬಗ್ಗೆ ಆಸಕ್ತಿ ಇದೆ. ಹಾಗೆಂದು ಯಾವುದೇ ಲಾಬಿ ಮಾಡುವುದಿಲ್ಲ. ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ 13 ಮಂದಿ ಸದಸ್ಯರು ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಅಂತಿಮ ನಿರ್ಧಾರ ರಾಷ್ಟ್ರೀಯ ನಾಯಕರಿಗೆ ಸೇರಿದ್ದು, ಅದಕ್ಕೆ ನಾನು ಬದ್ಧನಾಗಿದ್ದೇನೆ” ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಕೇಂದ್ರ ನಾಯಕತ್ವದ ತೀರ್ಮಾನವೇ ಅಂತಿಮವಾಗಿರಲಿದೆ ಎಂದು ಹೇಳಿದರು.
ರಾಜಕೀಯ ಶುದ್ಧೀಕರಣದ ಕುರಿತು ಮಾತನಾಡಿದ ಅವರು, “ರಾಜಕಾರಣದಲ್ಲಿ ಶುದ್ಧೀಕರಣ ನಿರಂತರವಾಗಿ ನಡೆಯುತ್ತಿದೆ. ಆ ನಿಟ್ಟಿನಲ್ಲಿ ನಾನು ಯಶಸ್ವಿಯಾಗಿದ್ದೇನೆ. ಆದರೆ ಪುತ್ತೂರಿನ ಮಟ್ಟದಲ್ಲಿ ಅಲ್ಲ, ರಾಜ್ಯದ ಮುಖ್ಯಮಂತ್ರಿಯಾಗಿ, ರಾಜ್ಯಾಧ್ಯಕ್ಷನಾಗಿ ಹಾಗೂ ಕೇಂದ್ರ ಸಚಿವನಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅನುಭವ ನನಗಿದೆ” ಎಂದು ಹೇಳಿದರು.