ಹೊಸ ಸರ್ಕಾರದ ಕಾರ್ಯವೈಖರಿ ಮೌಲ್ಯಮಾಪನಕ್ಕೆ ಇನ್ನೂ ಸಮಯ ಬೇಕು: ಸತೀಶ್ ಕುಂಪಲ

ಮಂಗಳೂರು:ರಾಜ್ಯದ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಲು ಇನ್ನೂ ಸಮಯವಿದ್ದು, ಕಾಂಗ್ರೆಸ್ ಪಕ್ಷದೊಳಗಿನ ಬೆಳವಣಿಗೆಗಳು ಹಾಗೂ ಭಿನ್ನಾಭಿಪ್ರಾಯಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ತಿಳಿಸಿದ್ದಾರೆ .

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು , ಕಳೆದ ಮೂರು ವರ್ಷಗಳ ಆಡಳಿತದಲ್ಲಿ ಹಲವು ಯೋಜನೆಗಳ ಅನುಷ್ಠಾನ ಸಮರ್ಪಕವಾಗಿರಲಿಲ್ಲ ಎಂಬುದನ್ನು ಮುಖ್ಯಮಂತ್ರಿ ಅವರ ಹೇಳಿಕೆಗಳೇ ಸೂಚಿಸುತ್ತವೆ ಎಂದು ಟೀಕಿಸಿದರು.

ವಿದ್ಯಾರ್ಥಿಗಳು ಮತ್ತು ಯುವಕರಿಗಾಗಿ ಘೋಷಿಸಲಾಗಿದ್ದ ಕೆಲವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಬಸ್ ಪಾಸ್ ಸೇರಿದಂತೆ ಹಲವು ಭರವಸೆಗಳ ಅನುಷ್ಠಾನದ ಕುರಿತು ಸರ್ಕಾರದ ಕ್ರಮಗಳನ್ನು ಗಮನಿಸಿ ನಂತರವೇ ಅಭಿಪ್ರಾಯ ವ್ಯಕ್ತಪಡಿಸುವುದಾಗಿ ಅವರು ಹೇಳಿದರು.

“ಸರ್ಕಾರ ಜನರಿಗೆ ನೀಡಿರುವ ಭರವಸೆಗಳನ್ನು ಹೇಗೆ ಈಡೇರಿಸುತ್ತದೆ, ದ್ವೇಷದ ರಾಜಕಾರಣದಿಂದ ದೂರ ಉಳಿದು ಜನಪರ ಆಡಳಿತ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ” .ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ, ಜನವಿರೋಧಿ ನೀತಿ, ತುಷ್ಟೀಕರಣ ಮತ್ತು ದ್ವೇಷದ ರಾಜಕಾರಣವನ್ನು ಅನುಸರಿಸಿದೆ ಎಂದು ಆರೋಪಿಸಿದ ಅವರು, ಹೊಸ ಸರ್ಕಾರ ಅದಕ್ಕಿಂತ ಭಿನ್ನವಾದ ಆಡಳಿತ ನೀಡುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

“ಮುಖ್ಯಮಂತ್ರಿ ಒಳ್ಳೆಯ ಆಡಳಿತ ನೀಡಲಿ ಎಂಬ ಶುಭಾಶಯ ನಮ್ಮದು. ಆದರೆ ಈಗ ಸಚಿವ ಸಂಪುಟದಲ್ಲಿ ಹೆಚ್ಚಿನವರು ಹಿಂದಿನ ಸರ್ಕಾರದಲ್ಲೇ ಸಚಿವರಾಗಿದ್ದವರೇ ಆಗಿದ್ದಾರೆ. ಮುಖ ಬದಲಾಗಿರಬಹುದು, ಆದರೆ ವ್ಯವಸ್ಥೆ ಬಹುತೇಕ ಅದೇ ಇದೆ” ಎಂದು ಅವರು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆ ಇರುವುದಾಗಿ ಅಭಿಪ್ರಾಯಪಟ್ಟ ಅವರು, ಮುಂದಿನ ದಿನಗಳಲ್ಲಿ ಪಕ್ಷದ ಕೆಲವು ಹಿರಿಯ ನಾಯಕರ ನಡೆ-ನುಡಿಗಳು ರಾಜಕೀಯ ಚರ್ಚೆಗೆ ಕಾರಣವಾಗಬಹುದು ಎಂದು ಹೇಳಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಭಾರತೀಯ ಜನತಾ ಪಾರ್ಟಿ ಸಮಗ್ರವಾಗಿ ಪರಿಶೀಲಿಸಿ ಮುಂದಿನ ರಾಜಕೀಯ ಕಾರ್ಯತಂತ್ರ ರೂಪಿಸಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ , ಯತೀಂದ್ರ ಆಳ್ವ , ಧನಲಕ್ಷ್ಮಿ , ಸಂಜಯ್ ಪ್ರಭು , ವಸಂತ ಪೂಜಾರಿ , ಡಾ ಮಮತಾ ರಾವ್ , ಉಮೇಶ್ ಕೊಟ್ಯಾನ್ , ನಂದನ್ ಮಲ್ಯ ಸಹಿತ ಮತ್ತಿತರರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!