ಮೂಡುಬಿದಿರೆ, ಜೂನ್ 6:
ಮಂಗಳೂರು–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಗುತ್ತಿಗೆದಾರ ಸಂಸ್ಥೆ ಡಿಬಿಎಲ್ (DBL) ಕೈಗೊಂಡಿರುವ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ಮಿಜಾರು ಸಮೀಪ ಹೆದ್ದಾರಿಯ ಒಂದು ಭಾಗ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸ್ಥಳೀಯರ ಆರೋಪದ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ವೈಜ್ಞಾನಿಕ ರೀತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೇ, ನೀರು ಹರಿಯುವ ದೊಡ್ಡ ಸೇತುವೆ ಅಗತ್ಯವಿದ್ದ ಸ್ಥಳದಲ್ಲಿ ಅತೀ ಚಿಕ್ಕ ಮೋರಿ ನಿರ್ಮಿಸಲಾಗಿದೆ. ಇದರ ಪರಿಣಾಮ ಮಳೆನೀರು ಸರಾಗವಾಗಿ ಹರಿಯದೆ ರಸ್ತೆಯ ಅಡಿಭಾಗ ಕುಸಿದು ರಸ್ತೆ ಹೊಂಡವಾಗಿ ಮಾರ್ಪಟ್ಟಿದೆ.
ಪ್ರಸ್ತುತ ರಸ್ತೆ ಕುಸಿದ ಪ್ರದೇಶದ ಬದಿಯಲ್ಲಿ ಕೇವಲ ಕಲ್ಲುಗಳನ್ನು ಇರಿಸಲಾಗಿದ್ದು, ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಯಾವುದೇ ಸುರಕ್ಷತಾ ಸೂಚನಾ ಫಲಕಗಳನ್ನು ಸಂಬಂಧಪಟ್ಟ ಇಲಾಖೆ ಅಳವಡಿಸಿಲ್ಲ. ಇದರಿಂದಾಗಿ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಗಣೇಶ್, “ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಮೋರಿ ನಿರ್ಮಿಸದೇ ಇರುವುದರಿಂದ ಮಳೆನೀರು ರಸ್ತೆಯಲ್ಲೇ ನಿಂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ನಿರ್ಮಿಸಿರುವ ಕೆಲವು ಮೋರಿಗಳಲ್ಲಿಯೂ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಇದೇ ಇಂದಿನ ಅನಾಹುತಕ್ಕೆ ಪ್ರಮುಖ ಕಾರಣ” ಎಂದು ಆರೋಪಿಸಿದರು.
ಇನ್ನೋರ್ವ ಸ್ಥಳೀಯರಾದ ತನ್ಸೀರ್ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೊದಲು ಸರ್ವೀಸ್ ರಸ್ತೆ ನಿರ್ಮಿಸದೇ ಇರುವುದರಿಂದ ನಿರಂತರ ಸಮಸ್ಯೆಗಳು ಉಂಟಾಗುತ್ತಿವೆ. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮಿಜಾರಿನಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರತಿದಿನ ಸಂಚರಿಸುತ್ತಾರೆ. ಆದರೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದ ಕಾರಣ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.
ಸ್ಥಳೀಯರ ಪ್ರಕಾರ, ಡಿಬಿಎಲ್ ಕಂಪನಿಯ ಅವೈಜ್ಞಾನಿಕ ಕಾಮಗಾರಿ, ನೀರು ಹರಿಯುವ ಸ್ಥಳದಲ್ಲಿ ಚಿಕ್ಕ ಮೋರಿ ನಿರ್ಮಿಸಿರುವುದು ಹಾಗೂ ಅದರ ಅಡಿಪಾಯವನ್ನು ನೀರಿನ ಹರಿವಿನ ಮಟ್ಟಕ್ಕಿಂತ ಮೇಲ್ಮಟ್ಟದಲ್ಲಿ ನಿರ್ಮಿಸಿರುವ ಕುರಿತು 50ಕ್ಕೂ ಹೆಚ್ಚು ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದಾಗ್ಯೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.
ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು ಕಾಮಗಾರಿ ಆರಂಭವಾದ ಬಳಿಕ ಒಮ್ಮೆಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ಯಾವುದೇ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸದಿರುವುದರ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದೇ ಮಳೆಯ ಹೊಡೆತಕ್ಕೆ ತೆಂಕ ಮಿಜಾರಿನ ಹೆದ್ದಾರಿ ಭಾಗ ಕುಸಿದಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು ಹಾಗೂ ಸಂಬಂಧಪಟ್ಟ ಇಂಜಿನಿಯರ್ಗಳ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಅವರ ವಿರುದ್ಧ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.