ಬೆಂಗಳೂರು, ಜೂ. 8: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮರು ಅವಕಾಶ ನೀಡದೆ ಪ್ರೊ. ಎಂ. ನಾಗರಾಜ್ ಅವರನ್ನು ಕರ್ನಾಟಕದಿಂದ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಹಿಂದುಳಿದ ವರ್ಗದ (ಒಬಿಸಿ) ನಾಯಕ ಪ್ರೊ. ಎಂ. ನಾಗರಾಜ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಜೊತೆಗೆ ವಿಧಾನ ಪರಿಷತ್ ಚುನಾವಣೆಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.
ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಎಚ್.ಡಿ. ದೇವೇಗೌಡರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅವರನ್ನು ಮತ್ತೊಮ್ಮೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಹೊಸ ಮುಖಕ್ಕೆ ಅವಕಾಶ ನೀಡುವ ಮೂಲಕ ಅಚ್ಚರಿಯ ನಡೆ ಪ್ರದರ್ಶಿಸಿದೆ.
ಪಕ್ಷದ ಮೂಲಗಳ ಪ್ರಕಾರ, ವಯಸ್ಸು ಹಾಗೂ ಆರೋಗ್ಯದ ಅಂಶಗಳನ್ನು ಪರಿಗಣಿಸಿ ಬಿಜೆಪಿ ಈ ತೀರ್ಮಾನ ಕೈಗೊಂಡಿದೆ. ಇದರೊಂದಿಗೆ ದೇವೇಗೌಡರ ಮರು ಆಯ್ಕೆಯ ನಿರೀಕ್ಷೆಗೆ ತೆರೆ ಬಿದ್ದಿದೆ.
ರಾಜ್ಯಸಭೆ ಟಿಕೆಟ್ ರೇಸ್‌ನಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರೂ ಕೇಳಿಬಂದಿದ್ದರೂ, ಅಂತಿಮವಾಗಿ ಬಿಜೆಪಿ ಪ್ರೊ. ಎಂ. ನಾಗರಾಜ್ ಅವರಿಗೆ ಅವಕಾಶ ನೀಡಿದೆ.
ಬಿಜೆಪಿಯ ಈ ನಿರ್ಧಾರವು ಜೆಡಿಎಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಮೈತ್ರಿ ರಾಜಕಾರಣದಲ್ಲಿ ಇದರ ಪರಿಣಾಮದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.