ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಜೂನ್ 13ರವರೆಗೆ ನಡೆಯಲಿರುವ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಮುದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹಕ್ಕೆ ಬಹಳ ವಿಜೃಂಣೆಯಿಂದ ನಡೆಯುತ್ತಿದೆ .
ಕ್ಷೇತ್ರದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ, ಪಂಡರಾಪುರದ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಶರದಸ್ವಾಮಿ ಶಿವೂರಕರ ಅವರ ನೇತೃತ್ವದಲ್ಲಿ ಅಧಿಕ ಮಾಸದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸನಾತನ ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಅರಿತು ಬದುಕುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಆತ್ಮತತ್ವ ಒಂದೇ ಎಂಬ ಭಾವನೆಯೊಂದಿಗೆ ದ್ವೇಷವನ್ನು ತೊರೆದು ಬದುಕಿದಾಗ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದ ಅವರು, ಭಜನೆ ಮತ್ತು ಧ್ಯಾನವು ಮನಸ್ಸಿನ ದುಃಖವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರಗಳು ವಿಶ್ವದಾದ್ಯಂತ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು. ಪಾರಾಯಣದಂತಹ ಧಾರ್ಮಿಕ ಅನುಷ್ಠಾನಗಳು ವ್ಯಕ್ತಿಗೆ ಆಂತರಿಕ ಶಾಂತಿ ಮತ್ತು ಆತ್ಮಸಂತೃಪ್ತಿಯನ್ನು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಪಂಡರಾಪುರದ ವಿಠ್ಠಲನ ಕೃಪೆಯಿಂದ ಭಕ್ತ ವೃಂದದ ಮೂಲಕ ಈ ಕ್ಷೇತ್ರದಲ್ಲಿ ಧಾರ್ಮಿಕ ಚೈತನ್ಯ ಮೂಡುತ್ತಿದೆ. ಹಿಂದೂ ಸಂಸ್ಕೃತಿ ಮತ್ತು ಸಂಸ್ಕಾರಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಅಖಂಡ ಹರಿನಾಮ ಸಪ್ತಾಹವು ಹಿಂದೂ ಸಮಾಜಕ್ಕೆ ಮಹಾಯಜ್ಞದಂತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ದೇವರ ಸನ್ನಿಧಿಯಲ್ಲಿ ಎಲ್ಲರೂ ಸಮಾನರು. ಅಧಿಕ ಮಾಸದ ಅಂಗವಾಗಿ ನಡೆಯುತ್ತಿರುವ ಪಾರಾಯಣ ಕಾರ್ಯಕ್ರಮವು ಭಕ್ತಿ ಮತ್ತು ಆಧ್ಯಾತ್ಮಿಕತೆಯನ್ನು ಜನರಲ್ಲಿ ಮತ್ತಷ್ಟು ಬಲಪಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುದೇವ ಮಠದ ಟ್ರಸ್ಟಿ ಸುಜಿತಾ ವಿ. ಬಂಗೇರ, ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಮಹಾರಾಜ್, ಶ್ರೀ ಚೈತನ್ಯ ಸದ್ಗುರು ಗೋಪಾಲ ಕಾಕಾ ಮಕಾಶಿರ, ಹಿರೇಮಠದ ಡಾ. ಕಲ್ಲೇಶ್ವರ ಮಹಾಸ್ವಾಮೀಜಿ, ದಾದಾನಪಿ ಶಿವಾನಂದ ಮಠದ ಶ್ರೀ ನಿಜಾನಂದ ಸ್ವಾಮೀಜಿ, ವೀರಾನಂದ ಆಶ್ರಮದ ಚೆನ್ನಮಲ್ಲಯ್ಯ ಸ್ವಾಮೀಜಿ, ವೀರಮಲ್ಲೇಶ್ವರ ಸ್ವಾಮೀಜಿ, ಬಸವರಾಜ್ ಸ್ವಾಮೀಜಿ ಅಂದ್ರಲಾ ಹಾಗೂ ಸ್ವಾಮಿ ಬೋಳಗಿರಿ ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಂಡರಾಪುರ ಶಿವೂರಕರ ಸಂಸ್ಥೆಯ ವತಿಯಿಂದ ಪ್ರಕಟಿಸಲಾದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಗ್ರಂಥವನ್ನು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಇದೇ ವೇಳೆ ಅಧಿಕ ಮಾಸ ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಆರ್.ಟಿ. ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಸಮಿತಿಯ ಉಪಾಧ್ಯಕ್ಷ ರಮೇಶ್ ಪಾ. ಅರಕೇರಿ ಸ್ವಾಗತಿಸಿದರು. ಸದಸ್ಯ ಭೀಮ್ ಸಿಂಗ್ ವಿ. ರಜಮತ ವಿಜಯಪುರ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ರಾಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹ ಮತ್ತು ಅಧಿಕ ಮಾಸ ಪಾರಾಯಣ ಕಾರ್ಯಕ್ರಮದಲ್ಲಿ ಪಂಡರಾಪುರದ ಪಾರಾಯಣ ಸಮಿತಿಯ 1008 ಸದಸ್ಯರು ಭಾಗವಹಿಸುತ್ತಿದ್ದು, ಏಳು ದಿನಗಳ ಕಾಲ ಭಜನೆ, ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.