ಕೊಲ್ಲೂರು ದೇವಾಲಯದಲ್ಲಿ ವಿಜಯ್ ಭೇಟಿ; ಭದ್ರತೆ ಮತ್ತು ಭಕ್ತರ ಅನುಕೂಲದ ನಡುವೆ ಸಮತೋಲನದ ಪ್ರಶ್ನೆ

ವಿಐಪಿ ಭೇಟಿ ವೇಳೆ ಭಕ್ತರಿಗೆ ತೊಂದರೆ ತಪ್ಪಿಸಬೇಕು: ಕೊಲ್ಲೂರು ದರ್ಶನದ ಬಳಿಕ ಮತ್ತೆ ಚರ್ಚೆಗೆ ಬಂದ ವಿಶೇಷ ವ್ಯವಸ್ಥೆ

ಉಡುಪಿ: ದೇವಾಲಯಗಳಲ್ಲಿ ಅತಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಬಗ್ಗೆ ಆಗಾಗ ನಮ್ಮ ದೇಶದ ನ್ಯಾಯಾಲಯಗಳು ಸಂದರ್ಭಾನುಸಾರ ಅಸಮಾಧಾನ ವ್ಯಕ್ತಪಡಿಸಿವೆ. ತಮಿಳು ನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಖ್ಯಾತ ಶಕ್ತಿ ಪೀಠ ಕೊಲ್ಲೂರು‌ ಶ್ರೀ ಮೂಕಾಂಬಿಕಾ ದೇವಾಲಯ ಭೇಟಿಗೆ ಆಗಮಿಸಿದರು.ಅವರ ಭದ್ರತೆ ಹೇಗಿತ್ತು ಎಂಬುದರ ಒಂದು ನೋಟ ಇಲ್ಲಿದೆ.

ವಿ.ಐ.ಪಿ. ದರ್ಶನ ಎಂದರೆ ಸಾಮಾನ್ಯ ಭಕ್ತರಿಗೆ ತೊಂದರೆ ತಪ್ಪಿದ್ದಲ್ಲ. ಗುರುವಾರ ಮತ್ತು ಶುಕ್ರವಾರ ..ಹೀಗೆ ಎರಡು ದಿನಗಳ ಕಾಲ ಕೊಲ್ಲೂರಿನಲ್ಲಿ ಪೊಲೀಸ್ ಅಧಿಕಾರಿಗಳು ದೇವಾಲಯದ ಆಡಳಿತ ಮಂಡಳಿಯ ಜೊತೆ ಸರಣಿ ಸಭೆ ನಡೆಸಿದರು. ಹೀಗೆ ಭದ್ರತಾ ಹೊಣೆ ಹೊತ್ತವರಲ್ಲಿ ತಮಿಳು ನಾಡು ಮತ್ತು ಕರ್ನಾಟಕದ ಪೊಲೀಸರೂ ಸೇರಿದ್ದಾರೆ.

ಮುಖ್ಯಮಂತ್ರಿ ಬರುವಾಗ ಆವರಣದಲ್ಲಿ ಮ್ಯಾಟ್ ಹಾಕಬೇಕು, ದೇವಾಲಯದ ಒಳಗೆ ಇಬ್ಬರು ಅರ್ಚಕರಿಗೆ ಮಾತ್ರ ಅವಕಾಶ..ಇತ್ಯಾದಿ ಕಂಡೀಶನ್ ಗಳನ್ನು ವಿಜಯ್ ಅವರ ಭದ್ರತಾ ಸಿಬ್ಬಂದಿ ಸಭೆಗಳಲ್ಲಿ ಹಾಕಿದ್ದರು. ಒಂದು ಹಂತದಲ್ಲಿ ಇದರಿಂದ ಅಸಮಾಧಾನಗೊಂಡ ಧರ್ಮದರ್ಶಿಗಳು ಎಲ್ಲ‌ನಿಮ್ಮ ಮೂಗಿನ ನೇರಕ್ಕೆ ನಡೆಯುವುದು ಸಾಧ್ಯವಿಲ್ಲ ಎಂದು ನಯವಾಗಿ ಹೇಳಿಯೂ ಇದ್ದರು.ಕೊನೆಗೆ ಹಾಕಿದ ಕಂಡೀಶನ್ ಫೋಟೋ ಕೂಡಾ ತೆಗೆಯಬಾರದು ಎಂಬುದು. ನಮಗೊಂದು ದಾಖಲೆಗೆ ಬೇಕಲ್ಲ ಎಂದು ಆಡಳಿತ ಧರ್ಮದರ್ಶಿ ಬಾಬು ಹೆಗ್ಡೆ ಆ ಕಂಡೀಶನ್ ಜಾರಿಗೆ ಬಾರದಂತೆ ತಡೆದರು.

ತಮಿಳುನಾಡು ಮುಖ್ಯಮಂತ್ರಿ ‌ಕೊಲ್ಲೂರು ಭೇಟಿ ಶ್ರೀದೇವರ ದರ್ಶನಕ್ಕೆ ಬಂದ ಭಕ್ತರಿಗೆ ತೊಂದರೆ ಉಂಟು ಮಾಡಿಲ್ಲ ಎಂದರೆ ಅದು ಸತ್ಯಕ್ಕೆ ಮಾಡುವ ಅಪಚಾರ. ಶುಕ್ರವಾರ ಬಹಳ ಪವಿತ್ರ ಮತ್ತು ಶುಭ ದಿನವೆಂದು ಬಂದ ಅಂತಾರಾಜ್ಯ ಭಕ್ತರ ಕಾರ್ಯಕ್ರಮದ ವೇಳಾಪಟ್ಟಿಯನ್ನು ಮುಖ್ಯಮಂತ್ರಿ ಭೇಟಿ ಅಡಿ ಮೇಲು ಮಾಡಿತು ಎಂಬುದು ಸತ್ಯಕ್ಕೆ ಹತ್ತಿರವಾದ ಸಂಗತಿ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ಡಿಟೆಕ್ಟರ್ ಯಂತ್ರದಿಂದ ಕಂಭ ಕಂಭಗಳನ್ನು ಭದ್ರತಾ ಸಿಬ್ಬಂದಿ ಶೋಧಿಸಿದರು. ಕುಸುರಿ ಕೆತ್ತನೆಯ ಮೂಲೆಗಳನ್ನೂ ಬಿಡಲಿಲ್ಲ. ಇಡೀ ದೇವಾಲಯದ ಆವರಣದಿಂದ ‌ಸಾಮಾನ್ಯ ಭಕ್ತರನ್ನು ಹಠಾವೋ ಮಾಡಲಾಗಿತ್ತು. ಭಕ್ತರ ಶಾಪ ಯಾರನ್ನು ತಟ್ಟುತ್ತದೋ ಗೊತ್ತಿಲ್ಲ. ಬಹಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕುಮಾರ ಸ್ವಾಮಿ ಅವರು ಅಪರಾತ್ರಿಯಲ್ಲಿ ಕೊಲ್ಲೂರು ದೇವರ ದರ್ಶನಕ್ಕೆ ಬಂದಿದ್ದರು.ಕೇರಳದ ಭಕ್ತರು ಕೊನೆಯ ಪೂಜೆಯ ಬಳಿಕ ನೀಡುವ ತೀರ್ಥ ಪ್ರಸಾದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಪೂಜೆ ನೆರವೇರಿಸಿದರೆ ದೇವರ ಗುಡಿಯ ಬಾಗಿಲು ಹಾಕಬೇಕಾಗುತ್ತದೆ. ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಬರುವವರೆಗೆ ದೇವರಿಗೆ ಪೂಜೆಯನ್ನು ಮುಂದೂಡಲಾಗಿತ್ತು.

ಭದ್ರತಾ ಸಿಬ್ಬಂದಿಯ ಶೋಧ ಕಾರ್ಯ ನೋಡಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಓರ್ವರು ವೈರಸ್ ಇದ್ದರೆ ಇವರೇನು ಮಾಡುತ್ತಾರೆ ಎಂದು ಕೇಳಿದ್ದು ಬಹುಷಃ ಶೋಧ ಕಾರ್ಯ ನಡೆಸುತ್ತಿದ್ದವರ ಕಿವಿಗೆ ಬೀಳಲಿಲ್ಲ.

ಭದ್ರತೆಯ ಕಾರಣದಿಂದ ದಳಪತಿ ವಿಜಯ್ ಅವರ ಜೊತೆ ಹಿಂದೆ ಮತ್ತು ಮುಂದೆ ಎಂದು ಬಂದಿದ್ದ ವಾಹನಗಳ ಸಂಖ್ಯೆ ಅದರ ಅಜಮಾಸು ಇಪ್ಪತೈದು ದಾಟಿತ್ತು. ರಸ್ತೆಯನ್ನು ಬಂದ್ ಮಾಡಿದ್ದರಿಂದ ಸುರಿಯುತ್ತಿದ್ದ ಮಳೆಯ ನಡುವೆಯೂ ಜನ ರಸ್ತೆ ಬದಿ ಸೇರಿ ವಿಸಿಲ್ ಗಳೊಂದಿಗೆ ದಳಪತಿಯನ್ನು ಸ್ವಾಗತಿಸಿದರು. ನಟ, ರಾಜಕಾರಣಿ ವಿಜಯ್ ಮುಖದಲ್ಲಿ ಯಾವ ಸಂದರ್ಭದಲ್ಲಿಯೂ ನಗು ಮಾಸಿರಲಿಲ್ಲ. ಅವಕಾಶ ಮಾಡಿಕೊಂಡು ಅಭಿಮಾನಿಗಳತ್ತ‌ ಕೈ ಬೀಸುವುದನ್ನು ಅವರು ಮರೆಯಲಿಲ್ಲ. ಹಿಂದೆ ಜಯಲಲಿತಾ ಕೂಡ ಕೊಲ್ಲೂರಿಗೆ ಬಂದಿದ್ದರು. ಆಗಿನ ಭದ್ರತೆಗೆ ಹೋಲಿಸಿದರೆ ಈ ಬಾರಿ ಅಷ್ಟು ಕಟ್ಟು ನಿಟ್ಟು ಇರಲಿಲ್ಲ. ಜಯಲಲಿತಾ ಭೇಟಿ ಸಂದರ್ಭ ಇಡೀ ಕೊಲ್ಲೂರನ್ನೆ ಅವರ‌ ಸಿಬ್ಬಂದಿ ತಮ್ಮ ಕಪಿ ಮುಷ್ಟಿಗೆ ತೆಗೆದುಕೊಂಡಿದ್ದರು. ವಿಜಯ್ ಆ ಮಟ್ಟಿಗೆ ಹೆಚ್ಚು ಉಪದ್ರ ಕೊಡಲಿಲ್ಲ ಎನ್ನುತ್ತಾರೆ ಅಂದಿನ ಭದ್ರತಾ ಕಿರುಕುಳ ಅನುಭವಿಸಿದವರು.

SHARE
Loading spinner

Leave a Reply

Your email address will not be published. Required fields are marked *

error: Content is protected !!