ಕಲ್ಲಡ್ಕ,: ಪರಿಸರದ ನಾಶಕ್ಕೆ ಮಾನವನ ಅತಿಯಾದ ಆಸೆ ಮತ್ತು ದುರಾಸೆಗಳೇ ಪ್ರಮುಖ ಕಾರಣವಾಗಿದ್ದು, ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಹೇಳಿದರು.
ಅವರು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಹಾಗೂ ಜವಾಹರ ಬಾಲ್ ಮಂಚ್, ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಸ್ವಚ್ಛ ಪರಿಸರ ನಮ್ಮ ಧ್ಯೇಯ, ಹಸಿರು ಬದುಕು ನಮ್ಮ ಶ್ರೇಯ” ಎಂಬ ಸಂದೇಶದೊಂದಿಗೆ ಮಾತನಾಡಿದ ಅವರು, ಪರಿಸರದಿಂದ ನಾವು ಹೊರತು, ನಮ್ಮಿಂದ ಪರಿಸರವಲ್ಲ. ಪರಿಸರದ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ತಮ್ಮ ಜನ್ಮದಿನದಂತಹ ವಿಶೇಷ ಸಂದರ್ಭಗಳಲ್ಲಿ ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಪ್ರಕೃತಿಯ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ ಹಾಗೂ ಜವಾಹರ ಬಾಲ್ ಮಂಚ್ ಜಿಲ್ಲಾ ಅಧ್ಯಕ್ಷೆ, ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶೈಲಜಾ ರಾಜೇಶ್ ಮಾತನಾಡಿ, ಪ್ರಕೃತಿ ನಾಶದಿಂದ ವಿಕೋಪಗಳು ಉಂಟಾಗುತ್ತಿದ್ದು, ಪರಿಸರ ಶಿಕ್ಷಣದ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಅಗತ್ಯವಾಗಿದೆ ಎಂದರು. ಭೂಮಿಯ ಸಂರಕ್ಷಣೆ ಕೇವಲ ಸಂಸ್ಥೆಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬರ ಜಾಗೃತಿ ಮತ್ತು ಸಣ್ಣ ಸಣ್ಣ ಪ್ರಯತ್ನಗಳಿಂದ ದೊಡ್ಡ ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ವಿದ್ಯಾರ್ಥಿಗಳಿಗಾಗಿ ಸ್ವಚ್ಛ ಮತ್ತು ಸುಂದರ ಪರಿಸರ ವಿಷಯದ ಕುರಿತು ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ವಾತ್ಸಲ್ಯ ಸಂಸ್ಥೆಯ ಸದಸ್ಯೆ ಇಂದಿರಾ, ಶಾಲಾ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್ ಹಾಗೂ ಹಿರಿಯ ವಿದ್ಯಾರ್ಥಿನಿ ಲಿಖಿತಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು. ಶಿಕ್ಷಕಿ ಸಂಪ್ರಿಯ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು.