ಹದಗೆಟ್ಟ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಲು ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿಯಿಂದ ಪ್ರತಿಭಟನೆ

ಬೋಳಿಯಾರ್ , ಜೂ22: ಬೋಳಿಯಾರ್ ಗ್ರಾಮದ ಗೋಳಿದಡಿ ಕ್ರಾಸ್‌ನಿಂದ ರಂತಡ್ಕವರೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿಯ ವತಿಯಿಂದ ಇಂದು ಬೋಳಿಯರ್ ಗೋಳಿದಡಿ ಕ್ರಾಸ್ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿಯ ಅಧ್ಯಕ್ಷರಾದ ಶರ್ವನ್ ಬೋಳಿಯಾರ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಶ್ರಫ್ ಮೋನು ಬೋಳಿಯಾರ್ ಅವರು, ಬೋಳಿಯಾರ್ ಕ್ರಾಸ್ / ರಂತಡ್ಕ ಜಾರದಗುಡ್ಡೆ ದರ್ಗದವರೆಗೆ ಸಂಪರ್ಕ ಇರುವ ಈ ರಸ್ತೆಗೆ ಡಾಂಬರು ಹಾಕಿ ವರ್ಷಗಳು ಹದಿಮೂರು ಕಳೆದಿದ್ದು ಈಗ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ದುರಸ್ತಿಗೆ ಸಾರ್ವಜನಿಕರು ಮನವಿ ಸಲ್ಲಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿದರು.

ಮುಖ್ಯ ಭಾಷಣ ಮಾಡಿದ ಎಸ್.ಡಿ.ಪಿ.ಐ ಮುಖಂಡರಾದ ರಹಿಮಾನ್ ಬೋಳಿಯಾರ್ ಅವರು, ರಸ್ತೆಯ ದುಸ್ಥಿತಿಯಿಂದ ಗ್ರಾಮಸ್ಥರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದು, ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಅಪಘಾತಗಳ ಸಂಭವ ಹೆಚ್ಚಾಗಿದ್ದು, ಜನರ ಜೀವಕ್ಕೆ ಅಪಾಯ ಉಂಟಾಗುವ ಮುನ್ನವೇ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು ರಸ್ತೆ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು ಹಾಗೂ ಬೋಳಿಯಾರ್ ಗ್ರಾಮದ ಬಹುತೇಕ ವಾರ್ಡ್ ಗಳ ಮೂಲಭೂತ ಸೌಕರ್ಯಗಳ ವೈಫಲ್ಯತೆಯ ಬಗ್ಗೆ ಒತ್ತಿ ಹೇಳಿದರು.

ಪ್ರತಿಭಟನೆ ಸಭೆಯಲ್ಲಿ ಎಸ್.ಡಿ.ಪಿ.ಐ ಮಂಗಳೂರು-ಉಳ್ಳಾಲ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕ್ಷೇತ್ರ ಕಾರ್ಯದರ್ಶಿ ಆರೀಫ್ ಬೋಳಿಯಾರ್ ಹಾಗೂ ಸಮಿತಿ ಸದಸ್ಯರಾದ ಹನೀಫ್ ಬೋಳಿಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಇರ್ಫಾನ್ ರಂತಡ್ಕ ಸ್ವಾಗತ ಕೋರಿದರು. ಕಬೀರ್ ರಂತಡ್ಕ ಧನ್ಯವಾದ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!