ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಸಂತಾಪ

ಬೆಂಗಳೂರು, ಜೂ.23: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿಧನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

“ಪಕ್ಷಾತೀತವಾಗಿ ಎಲ್ಲಾ ಸರ್ಕಾರಗಳ ಜನಪರ ಕಾರ್ಯಕ್ರಮಗಳ ಯಶಸ್ಸಿಗೆ ಕರೆ ನೀಡುತ್ತಿದ್ದರು. ಕರ್ನಾಟಕದಲ್ಲಿ ಇಂಧ್ರ ಧನುಷ್ ಲಸಿಕೆ ಕಾರ್ಯಕ್ರಮ ನಡೆದಾಗ ಮೊಹಲ್ಲಾಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದ್ದರು.

ಗೌರವಾನ್ವಿತ ಧಾರ್ಮಿಕ ನಾಯಕರಾಗಿ ಮುಸ್ಲಿಂ ಸಮುದಾಯದ ಏಳಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದರು. ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಧರ್ಮದ ಜೊತೆಗೆ ಶಿಕ್ಷಣ ಹಾಗೂ ಸಮಾಜಿಕ ಕೆಲಸಗಳಿಂದ ಗುರುತಿಸಿಕೊಂಡಿದ್ದರು. ಇವರ ಮಾರ್ಗದರ್ಶನದಲ್ಲಿ ಸಾವಿರಾರು ಜನ ಜೀವನ ರೂಪಿಸಿಕೊಂಡಿದ್ದಾರೆ.

ದ.ಕ. ಮತ್ತು ಕೇರಳ ರಾಜ್ಯದ ಸುಮಾರು 200ಕ್ಕೂ ಅಧಿಕ ಜಮಾಅತ್ ಗಳ ಖಾಝಿಯಾಗಿದ್ದ ಇವರ ಅಗಲಿಕೆ ಇಡೀ ಸಮಾಜಕ್ಕೆ ಅಪಾರ ನಷ್ಟ. ಏಕೆಂದರೆ ತಮ್ಮ ಸಮನ್ವಯದ ಚಿಂತನೆಗಳಿಂದ ಸಮಾಜದಲ್ಲಿ ಅಚ್ಚಳಿಯದ ಕೊಡುಗೆ ನೀಡಿದ್ದಾರೆ.

ಇವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಇವರ ಕುಟುಂಬ ವರ್ಗ, ಅನುಯಾಯಿಗಳು ಹಾಗೂ ಸಮಸ್ತ ಮುಸ್ಲಿಂ ಸಮುದಾಯಕ್ಕೆ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!