ಬಿಸಿರೋಡಿನಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ: 25 ವಾಹನಗಳ ವಿರುದ್ಧ ಪ್ರಕರಣ

ಬಂಟ್ವಾಳ: ಬಿಸಿರೋಡಿನ ಹೃದಯಭಾಗದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿದ್ದ ವಾಹನ ಸವಾರರ ವಿರುದ್ಧ ಟ್ರಾಫಿಕ್ ಎಸ್‌ಐ ಆದರ್ಶ್ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದೆ. ಜೊತೆಗೆ ಸಂಚಾರ ದಟ್ಟಣೆ ಮತ್ತು ಕಿರಿಕಿರಿ ಉಂಟು ಮಾಡುತ್ತಿದ್ದ ಬಸ್ ಹಾಗೂ ರಿಕ್ಷಾ ಚಾಲಕರಿಗೆ ಎಚ್ಚರಿಕೆ ನೀಡಿ ನಿಯಮ ಪಾಲನೆಯ ಪಾಠ ಮಾಡಿದ್ದಾರೆ.

ಬಿಸಿರೋಡಿನ ಬಸ್ ನಿಲ್ದಾಣದ ಬಳಿ ಗ್ರಾಮೀಣ ಭಾಗಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳು ಹಾಗೂ ಗ್ರಾಮೀಣ ಪರವಾನಗಿ ಹೊಂದಿರುವ ರಿಕ್ಷಾಗಳು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ವತಃ ಎಸ್‌ಐ ಆದರ್ಶ್ ಸ್ಥಳಕ್ಕೆ ಭೇಟಿ ನೀಡಿ ಚಾಲಕರಿಗೆ ಸೂಚನೆ ನೀಡಿದರು.

ಕಾರ್ಯಾಚರಣೆ ವೇಳೆ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಒಟ್ಟು 25 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 13 ಪ್ರಕರಣಗಳು ಕರ್ಕಶ ಹಾರ್ನ್ ಅಳವಡಿಸಿಕೊಂಡ ವಾಹನಗಳಿಗೆ ಸಂಬಂಧಿಸಿದ್ದಾಗಿದ್ದು, ಉಳಿದ ಪ್ರಕರಣಗಳು ನಂಬರ್ ಪ್ಲೇಟ್ ಇಲ್ಲದ ಹಾಗೂ ನಿಯಮಬಾಹಿರ ಸೈಲೆನ್ಸರ್ ಅಳವಡಿಸಿಕೊಂಡ ವಾಹನಗಳ ವಿರುದ್ಧ ದಾಖಲಾಗಿವೆ.

ಇದೇ ಮಾದರಿಯ ಕಾರ್ಯಾಚರಣೆಯನ್ನು ಕೈಕಂಬ ಪ್ರದೇಶದಲ್ಲಿಯೂ ನಡೆಸುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದ್ದು, ಅಲ್ಲಿ ಕೂಡ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಅಡ್ಡಾದಿಡ್ಡಿ ವಾಹನ ಚಾಲನೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ

SHARE
Loading spinner

Leave a Reply

Your email address will not be published. Required fields are marked *

error: Content is protected !!