ಉಡುಪಿ: ಕಾಡಬೆಟ್ಟುವಿನ ಅತ್ಯಂತ ಪುರಾತನ ಇತಿಹಾಸ ಪ್ರಸಿದ್ಧ ಶ್ರೀ ಅಬ್ಬರದರಗ ವೀರಭದ್ರ ಸಹಪರಿವಾರ ಹಾಗೂ ಶ್ರೀ ಶನೈಶ್ಚರ ದೇವಸ್ಥಾನದ ಜೀಣೋರ್ದ್ಧಾರ ಅಂಗವಾಗಿ ಜೂನ್ 27ರಂದು ಶನಿವಾರ ತ್ರಯೋದಶಿ ತಿಥಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷವಾಗಿ ನವಗ್ರಹ ಸಹಿತ ಸಾಮೂಹಿಕ ಶ್ರೀ ಶನಿಶಾಂತಿ ಹೋಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ತಂತ್ರಿ, ಹಿರಿಯ ವಿದ್ವಾಂಸ ಕುಮಾರಗುರು ತಂತ್ರಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ಬ್ರಹ್ಮಕಲಶೋತ್ಸವ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಶನಿವಾರದಂದೇ ತ್ರಯೋದಶಿ ತಿಥಿ ಬರುವುದು ಅತ್ಯಂತ ವಿರಳ ಹಾಗೂ ಶ್ರೇಷ್ಠ ಎನ್ನಲಾಗುತ್ತದೆ. ಈ ದಿನವನ್ನು ‘ಶನಿ ತ್ರಯೋದಶಿ’ ಎಂದು ಕರೆಯಲಾಗುತ್ತಿದ್ದು, ಅಂದು ಶ್ರೀ ಶನಿದೇವರ ಪೂಜಾ ಪುರಸ್ಕಾರಗಳನ್ನು ನೆರವೇರಿಸುವುದರಿಂದ ಭಕ್ತರಿಗೆ ಅನೇಕ ರೀತಿಯ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಸುದ್ದಿಗೋಷ್ಠಿಯಲ್ಲಿ ಜೀಣೋರ್ದ್ಧಾರ ಮತ್ತು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ. ಉದಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪದಾಧಿಕಾರಿಗಳಾದ ಮಧುಕರ ಮುದ್ರಾಡಿ, ಮೋಹನ್ ಶೆಟ್ಟಿ, ಸುರೇಂದ್ರ ಶೇಖರ್, ರವಿ ಶೆಟ್ಟಿ, ರಾಜ್ಗೋಪಾಲ ರೈ, ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.