ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಮತ್ತೆ ಚೈತನ್ಯ

ದುಬೈ:ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಗ್ಗಿ ಶಾಂತಿ ಒಪ್ಪಂದ ಜಾರಿಗೆ ಬಂದ ಬೆನ್ನಲ್ಲೇ ಜಾಗತಿಕ ವ್ಯಾಪಾರಕ್ಕೆ ಮಹತ್ವದ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಮತ್ತೆ ಚೇತರಿಕೆಯ ಲಕ್ಷಣಗಳನ್ನು ತೋರಿದೆ. ಹಲವು ತಿಂಗಳುಗಳ ಅನಿಶ್ಚಿತತೆ ಮತ್ತು ನಿರ್ಬಂಧಗಳ ಬಳಿಕ ಜಲಮಾರ್ಗದಲ್ಲಿ ಸಂಚಾರ ಗಣನೀಯವಾಗಿ ಹೆಚ್ಚಿರುವುದು ಜಾಗತಿಕ ವಾಣಿಜ್ಯ ವಲಯಕ್ಕೆ ನೆಮ್ಮದಿ ತಂದಿದೆ.

ಕಡಲ ಗುಪ್ತಚರ ಸಂಸ್ಥೆ ಕೆಪ್ಲರ್ (Kpler) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಜೂನ್ 24ರಂದು ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರದಲ್ಲಿ ಶೇ.105ರಷ್ಟು ಏರಿಕೆ ದಾಖಲಾಗಿದೆ. ಒಂದೇ ದಿನದಲ್ಲಿ 70 ಹಡಗುಗಳು ಜಲಸಂಧಿಯನ್ನು ದಾಟಿದ್ದು, ಅವುಗಳಲ್ಲಿ 53 ವಾಣಿಜ್ಯ ಹಡಗುಗಳಾಗಿವೆ. ಭಾರತದ ತೈಲ ಟ್ಯಾಂಕರ್‌ಗಳೂ ಈ ಸಂಚಾರದಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಶಾಂತಿ ಒಪ್ಪಂದದ ಬಳಿಕ ಹಡಗು ನಿರ್ವಾಹಕರಲ್ಲಿ ವಿಶ್ವಾಸ ಹೆಚ್ಚಾಗಿರುವುದು ಸಂಚಾರದ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದ ಜಾಗತಿಕ ತೈಲ ಹಾಗೂ ಸರಕು ಸಾಗಣೆ ವ್ಯವಸ್ಥೆಗೆ ಹೊಸ ಚೈತನ್ಯ ದೊರೆತಿದೆ.

ಆದರೆ, ಹಡಗು ಸಂಚಾರದಲ್ಲಿ ಏರಿಕೆ ಕಂಡುಬಂದಿದ್ದರೂ ಯುದ್ಧಪೂರ್ವದ ಸಾಮಾನ್ಯ ಸ್ಥಿತಿಗೆ ಇನ್ನೂ ಸಂಪೂರ್ಣವಾಗಿ ಮರಳಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೀಡಿರುವ ಎಚ್ಚರಿಕೆಗಳು, ಕಡಿಮೆ ಗೋಚರಿಸುವ ಟ್ರ್ಯಾಕಿಂಗ್ ವಿಧಾನಗಳನ್ನು ಬಳಸುತ್ತಿರುವ ಕೆಲವು ಹಡಗುಗಳು, ಸಮುದ್ರದಲ್ಲಿನ ಸ್ಫೋಟಕಗಳನ್ನು ಸಂಪೂರ್ಣವಾಗಿ ತೆರವುಗೊಳಿಸದಿರುವುದು ಸೇರಿದಂತೆ ಹಲವು ಅಂಶಗಳು ಇನ್ನೂ ಕಳವಳಕ್ಕೆ ಕಾರಣವಾಗಿವೆ.

ಟೆಹ್ರಾನ್‌ನ ಅನುಮೋದನೆ ಇಲ್ಲದೆ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಬಳಸಬಾರದು ಎಂದು ಐಆರ್‌ಜಿಸಿ ವಾಣಿಜ್ಯ ಹಡಗುಗಳಿಗೆ ಎಚ್ಚರಿಕೆ ನೀಡಿರುವುದು, ಅಮೆರಿಕ–ಇರಾನ್ ನಡುವಿನ ಮಾತುಕತೆಗಳು ಇನ್ನೂ ಸೂಕ್ಷ್ಮ ಹಂತದಲ್ಲಿರುವುದನ್ನು ಸೂಚಿಸುತ್ತಿದೆ.

ಇದರ ನಡುವೆ ಒಮಾನ್ ಸರ್ಕಾರ ಜೂನ್ 24ರಂದು ಹಾರ್ಮುಜ್ ಜಲಸಂಧಿಯಲ್ಲಿ ಹೊಸ ಹಡಗು ಕಾರಿಡಾರ್‌ನ್ನು ಘೋಷಿಸಿದ್ದು, ಇದಕ್ಕೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (IMO) ಸಹಯೋಗದೊಂದಿಗೆ ಹಡಗುಗಳ ಸುರಕ್ಷಿತ ಸಂಚಾರವನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಈ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಒಮಾನ್ ಸ್ಪಷ್ಟಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!